ಕೋಲದ ಅಣಿ ತಯಾರಿಕೆ ಒಂದು ದೊಡ್ಡ ಕಲೆ. ಸರಳ ವಸ್ತುಗಳನ್ನು ಬಳಸಿ ಇದನ್ನು ತಯಾರಿಸಲು ಬಹಳ ಚಾಕಚಕ್ಯತೆ ಮತ್ತು ತಾಳ್ಮೆ ಬೇಕು.

ನಲಿಕೆ, ಪರವ, ಪಂಬದ ಮೊದಲಾದವರು ತುಳುನಾಡಿನ ‌ನಾನಾ ದೈವಗಳಿಗೆ ತಮ್ಮನ್ನು ಸಜ್ಜುಗೊಳಿಸಿಕೊಳ್ಳುವುದು ಆರಾಧನೆಯ ಒಂದು ಭಾಗ. ಅದರ ಜೊತೆಗೆ ಅದು ಒಂದು ಕಲಾಪ್ರಕಾರವೂ ಆಗಿದೆ. ಯಾವುದನ್ನು ಒಬ್ಬರು ಕೈವಶ ಮಾಡಿಕೊಂಡಿರೋ ಅದು ಒಂದು ಕಲೆ. ಹಿಂದೆಲ್ಲ 64 ವಿದ್ಯೆಗಳು ಎಂದು ಹೇಳುತ್ತಿದ್ದ ಇದರಲ್ಲಿ ಒಳಿತು ಕೆಡುಕು ಎರಡೂ ಇದೆ.

ಆರಾಧನೆ ಒಂದು ಕಲೆಯಾದರೆ ಅದಕ್ಕೆ ತನ್ನನ್ನು ಸಿದ್ಧ ಪಡಿಸಿಕೊಳ್ಳುವುದು ಇನ್ನೊಂದು ಕಲೆ. ಕಲಾವಿದ ಇದ್ದರೆ ಕಲೆ. ಅಂದರೆ ಕಲೆಯನ್ನು ಕಲಾವಿದರು ರೂಪಿಸಿದರೇ ಹೊರತು ಕಲೆ ಕಲಾವಿದರನ್ನಲ್ಲ. ಕಲಾವಿದರು ರೂಪಿಸಿದ ಒಂದು ಕಲೆಯಲ್ಲಿ ಒಬ್ಬ ತೊಡಗಿಸಿಕೊಂಡು ಕಲಾವಿದ ಆಗಬಹುದು. ಆದರೆ ಕಲೆಯನ್ನು ಆತ ರೂಪಿಸದಿದ್ದರೆ ಆತ ಆ ಕಲೆಯ ಯಾರದೋ ಒಬ್ಬರ ಅನುಯಾಯಿ ಮಾತ್ರ ಆಗಿರುತ್ತಾನೆ.

ಅಣಿ ಎಂದರೆ ಸಜ್ಜು ಎಂದಷ್ಟೇ ಅರ್ಥ. ಆದರೆ ಅಣಿಯಾದ ಅಲಂಕಾರಿಕ ಕಿರೀಟವೂ ಅಣಿ ಎನಿಸಿದೆ. ಇದು ಪ್ರಭಾವಳಿಯ ಇನ್ನೊಂದು ರೂಪ. ಸಾಮಾನ್ಯ ‌ವಸ್ತುಗಳಾದ ತಿರಿ ಓಲಿ. ಅಂದರೆ ತೆಂಗಿನ ತಿರುಳು ಗರಿ ಎಲೆ. ಅಡಕೆಯ ಹಾಳೆ ಇಂಥವನ್ನು ಬಳಸಿ ಅಣಿ ತಯಾರಿಸುತ್ತಾರೆ. ಇದನ್ನು ದೈವ ಕಲಾವಿದರ ಬಳಗದ ಒಬ್ಬರು ದೈವ ಕಲಾವಿದರೊಡನೆ‌ ಸೇರಿ ತಯಾರಿಸುತ್ತಾರೆ. ಎಲೆ, ಹಾಳೆಗಳನ್ನು ಕತ್ತರಿಸುವುದು, ಸೂಕ್ತ ಸಿಂಗಾರ ಭಾವದೊಡನೆ ಅದಕ್ಕೊಂದು ರೂಪ ಕೊಡುವುದು ಈ ಕಲೆಯ ನೆಲೆ ಬೆಲೆ ಆಗಿದೆ. ಬೆತ್ತ, ಬೆಂಡು, ಸರಳ ಹರಳು ಮೊದಲಾದವನ್ನು ಕೂಡ ಈ ತಯಾರಿಕೆಯಲ್ಲಿ ಬಳಸುತ್ತಾರೆ.

ಚಿತ್ರ ಚಿತ್ತಾರ ಚಿತ್ರದಲ್ಲಿ ಇದ್ದು, ಕೈಗಳು ಅದರಂತೆ ಕ್ರಿಯಾಶೀಲವಾಗಿ ತೊಡಗಿಕೊಂಡರೆ ಕಲೆಯೊಂದು ಅರಳುತ್ತದೆ.

ಕೋಲ ಎಂದರೆ ಅಂದ ಎಂದಷ್ಟೆ ಅರ್ಥ. ಅಂದರೆ ದೈವದ‌ ಕೋಲ ಎಂದರೆ ದೈವವನ್ನು ಅಂದಗೊಳಿಸುವುದು ಎಂದು ಮಾತ್ರವೇ ಅರ್ಥ ಆಗುತ್ತದೆ. ಅದು ಕಲಾವಿದ ಅರದಳ ಎಂಬ ಮೂಲ ಅರಿಸಿನ ಹಚ್ಚಿ, ಅದರ ಮೇಲೆ ಚಿಟ್ಟೆ ಇಡುವುದರೊಂದಿಗೆ ಆರಂಭವಾಗುತ್ತದೆ. ಸಾಮಾನ್ಯ ರಂಗೋಲಿ ಕೂಡ ಅಂಥ ತಯಾರಿಯೇ ಆಗಿದೆ. ‌ಅಲ್ಲೂ ಮೊದಲು ಚಿಟ್ಟೆ ಇಲ್ಲವೇ ಬೊಟ್ಟು ಇಟ್ಟು, ಅನಂತರ ಗೆರೆಗಳ ಮೂಲಕ ಚಿತ್ತಾರ ಮೂಡಿಸಲಾಗುತ್ತದೆ. ಅನಂತರ ಬಣ್ಣ ತುಂಬಿ ಅಂದ ಕೂಡಿಸಲಾಗುತ್ತದೆ.

ಅಂದ ಎಂಬ ಅರ್ಥದ ಕೋಲ ಎಂಬ ದ್ರಾವಿಡ ಪದ ಅಂದಗೊಳಿಸುವ ಎಲ್ಲದರಲ್ಲೂ ಒಡಮೂಡಿರುತ್ತದೆ. ಕನ್ನಡದಲ್ಲಿ ಅದು ಎರಡು ಪದಗಳ ಕೂಡಿಕೆಯಾಗಿದೆ. ರಂಗು ಮತ್ತು ಕೋಲ ಎರಡು ಸೇರಿ ರಂಗೋಲವಾಗಿ, ರಂಗೋಲಿ ಎನಿಸಿದೆ. ದೈವ ‌ಕೋಲದಲ್ಲಿ ಕಲಾವಿದರು ತಮ್ಮನ್ನೇ ಕ್ಯಾನ್ವಾಸ್ ಮಾಡಿಕೊಳ್ಳುವುದು ಒಂದು ಬಗೆಯಾದರೆ, ಅದಕ್ಕೆ ಅಗತ್ಯದ ಅಣಿ ಇತ್ಯಾದಿ ಕೋಲಂದ ಮಾಡಿಕೊಳ್ಳುವುದು ಇನ್ನೊಂದು ಬಗೆ. ಎಲ್ಲವೂ ಸೇರಿದರೆ ಕೋಲ. ಅದನ್ನು ದೈವದೊಂದಿಗೆ ಬೆರೆಸಿದಾಗ ಅದು ದೈವ ಕೋಲ ಎನಿಸುತ್ತದೆ. ಕೋಲ ಕಳಚಿದ ಮೇಲೆ ಕಲಾವಿದ ಸಾಮಾನ್ಯ ಎನಿಸುವುದು ಈ ಸಮಾಜದ ರೋಗ ಇಲ್ಲವೇ ಸೋಜಿಗ. ಅಂದರೆ ಕೋಲ ಅಣಿ ಎಂಬ ಅಂದಗೊಳಿಸಿಕೊಳ್ಳುವುದಕ್ಕೆ ಎಷ್ಟು ಮಹತ್ವವಿದೆ ಎಂಬುದನ್ನು ತಿಳಿದುಕೊಳ್ಳಬಹುದು.

ಪುತ್ತೂರಿನ ನಲಿಕೆ ಜನಾಂಗದವರು ಗರ್ಡಾಡಿಯಲ್ಲಿ ಇತ್ತೀಚೆಗೆ ಕೋಲದ ಅಣಿ ತಯಾರಿಯಲ್ಲಿ ತೊಡಗಿರುವುದನ್ನು ಇಲ್ಲಿ ನೋಡಬಹುದು. ಅದು ಕಾನದ ಕಟದ ಸತ್ಯ ಸಾರಮಾನಿ ಕೋಲದ ತಯಾರಿ ಸಮಯ. ಇದನ್ನು ಗಮನಿಸಿದಾಗ ಕೋಲ ಕಾಲಕ್ಕಿಂತಲೂ ಅದರೆ ತಯಾರಿಗೆ ಹೆಚ್ಚು ಸಮಯ ಹಿಡಿಯುವುದು ಕಂಡುಬಂತು. ಇನ್ನೊಂದು ಅದಕ್ಕೆ ಅಗತ್ಯದ ತಿರಿ (ಸಿರಿ) ಓಲಿ, ಅಡಕೆ ಹಾಳೆ ಇತ್ಯಾದಿ ತಾಜಾ ಸಂಗ್ರಹ ಮಾಡಲು ಹಿಡಿಯುವ ಅವಧಿ ಬೇರೆಯದೇ ಆಗಿದೆ. -ಪೇಜಾ