ಕಾರ್ಕಳ: ಬಿಂಬ ಪ್ರಕಾಶನ ಸಮೂಹ ಮಾಧ್ಯಮ ಸಂಸ್ಥೆಗಳ ಮಾಲಕರಾದ ವಸಂತ್ ಕುಮಾರ್‌ರಿಗೆ ಬೆಂಗಳೂರುನಲ್ಲಿ ಲೇಖಕ ಹಾಗೂ ಸಾಹಿತಿ ಡಿ. ವಿ ಜಿಯವರ ಹೆಸರಿನಲ್ಲಿ ನೀಡಲಾಗುತ್ತಿರುವ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ) ಬೆಂಗಳೂರು ಇದರ ವತಿಯಿಂದ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ತುಮಕೂರು ನೊಣವಿನ ಕೆರೆ ಶ್ರೀ ಕಾಡು ಸಿದ್ದೇಶ್ವರ ಸಂಸ್ಥಾನ ಮಠದ ಶ್ರೀ ಡಾ. ಕರಿ ವೃಷಭ ದೇಶಿ ಕೇಂದ್ರ ಶಿವ ಯೋಗೀಶ್ವರ ಮಹಾಸ್ವಾಮಿಗಳು, ಹೊರನಾಡು ಅನ್ನ ಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ, ಅವದೂತರಾದ ವಿನಯ್ ಗುರೂಜಿ, ಬೇರು ಗುಂಡಿ ಬ್ರಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು , ಅರಣ್ಯ ಸಚಿವ ಈಶ್ವರ ಖಂಡ್ರೆ, ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ. ಎನ್. ಮಹೇಶ್, ಮಾದ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಶಾ ಖಾನಂ, ಉಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ಕಾನೂನು ಸಲಹೆಗಾರರಾದ ಅಮ್ರತೇಶ್, ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷರಾದ ರಾಜಶೇಖರ್, ಉಪಾಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ, ಇನ್ನೋರ್ವ ಉಪಾಧ್ಯಕ್ಷರಾದ ಟಿ. ಪಿ ಕೃಷ್ಣನ್ ಮತ್ತಿತರರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ನೀಡಲಾಯಿತು.
ವಸಂತ್ ಕುಮಾರ್ ಪರಿಚಯ
ಮೂಲತ; ಬೆಳ್ತಂಗಡಿಯವರಾದ ವಸಂತ್ ಕುಮಾರ್‌ರವರು ಪತ್ರಿಕಾ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದವರು. ಈಗಾಗಲೇ ಹಲವಾರು ಪತ್ರಿಕೆಗಳಲ್ಲಿ ಅವರು ಬರೆದ ಕಥೆಗಳು ಪ್ರಕಟವಾಗಿದೆ. ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಬಿಂಬ ಪ್ರಕಾಶನದ ಮೂಲಕ ಪತ್ರಿಕೆಗಳನ್ನು ವೆಬ್ ಸೈಟ್‌ಗಳನ್ನು, ಲೈವ್‌ಗಳನ್ನು ಅವರು ಆರಂಭಿಸಿ ಮುನ್ನಡೆಸುತ್ತಿದ್ದಾರೆ.
ಬೆಳ್ತಂಗಡಿ, ಸುಳ್ಯ, ಪುತ್ತೂರುಗಳಲ್ಲಿ ಪ್ರಭಾವೀ ಮಾಧ್ಯಮವಾಗಿರುವ ಸುದ್ದಿ ಬಿಡುಗಡೆ ಮೂಲಕ ಪತ್ರಿಕಾ ಕ್ಷೇತ್ರದ ಬದುಕು ಆರಂಭಿಸಿದ ಅವರು ಸತತವಾಗಿ ಪತ್ರಿಕೆ ಮುನ್ನಡೆಸಿದ್ದಾರೆ.
1996ರಿಂದ ಕಾರ್ಕಳದಲ್ಲಿ ಬಿಂಬ ಪ್ರಕಾಶನದ ಮೂಲಕ ಸ್ವಾವಲಂಬಿ ಪತ್ರಿಕಾ ಬದುಕು ಆರಂಭಿಸಿರುವ ಅವರು ಕೊಲ್ಲೂರಿನ ಕೊಡಚಾದ್ರಿ ಉಳಿಸಿ ಆಂದೋಲನದಲ್ಲಿ ಸಮಿತಿ ವಕ್ತಾರರಾಗಿ ಪಾಲ್ಗೊಂಡವರು.
ಪಶ್ಚಿಮ ಘಟ್ಟದಲ್ಲಿ ಸಕ್ರಿಯವಾಗಿದ್ದ ನಕ್ಸಲ್ ಚಳುವಳಿಯ ಬಗ್ಗೆ 2002ರಿಂದಲೇ ನಿರಂತರ ವರದಿ ಪ್ರಕಟಿಸಿದ ಅವರು ನಕ್ಷಲ್ ಶರಣಾಗತಿ ಪ್ರಕ್ರಿಯೆಗೂ ಪ್ರಯತ್ನ ಪಟ್ಟವರು.
ಕುದುರೆ ಮುಖದಲ್ಲಿ ಹುಲಿ ಯೋಜನೆ ಬಗ್ಗೆ, ಕಸ್ತೂರಿ ರಂಗನ್ ವರದಿಗಳ ಬಗ್ಗೆ ಆ ಪ್ರದೇಶದ ಜನರಲ್ಲಿ ನಿಕಟ ಸಂಪರ್ಕ ಇರಿಸಿ ಕೊಂಡು ಅರಿವು ಮೂಡಿಸಿದವರು.
2003ನೇ ಸಾಲಿನಲ್ಲಿ ಕಾರ್ಕಳ ತಾಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, 2004 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ ಕೂಡಾ ಸೇವೆ ಸಲ್ಲಿಸಿದವರು.
ಸಂದ ಪ್ರಶಸ್ತಿಗಳು
ಅವರ 31ವರ್ಷಗಳ ನಿರಂತರ ಪತ್ರಿಕಾ ಹಾದಿಯಲ್ಲಿ ಅವರಿಗೆ ಹಲವಾರು ಪ್ರಶಸ್ತಿಗಳು ಸಲ್ಲಿಕೆಯಾಗಿದೆ.
2012ನೇ ಸಾಲಿನಲ್ಲಿ ಕೇರಳದಲ್ಲಿ ಗಡಿನಾಡ ಸಾಂಸ್ಕೃತಿಕ ಪ್ರತಿಷ್ಠಾನ ರಾಜ್ಯ ಪ್ರಶಸ್ತಿ, ಕೊಪ್ಪಳದಲ್ಲಿ ಕವಿ ಸಿದ್ದಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿ, 2018ನೇ ಸಾಲಿನಲ್ಲಿ ಮಂಗಳೂರುನಲ್ಲಿ ಜಿಲ್ಲಾ ಸಾಧಕ ಪುರಸ್ಕಾರ, 2023 ನೇ ಸಾಲಿನಲ್ಲಿ ಸಕಲೇಶಪುರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2024 ನೇ ಸಾಲಿನಲ್ಲಿ ತಮಿಳ್ನಾಡಿನಲ್ಲಿ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಘದ ಸಮ್ಮೇಳನದಲ್ಲಿ ಪುರಸ್ಕಾರ ಹೀಗೆ ಹಲವಾರು ಪ್ರಶಸ್ತಿಗಳು ಸನ್ಮಾನಗಳು ಸಲ್ಲಿಕೆಯಾಗಿವೆ.
ನೂರಾರು ಮಂದಿ ಅನಾರೋಗ್ಯ ಪೀಡಿತರಿಗೆ, ಅಶಕ್ತರಿಗೆ ತನ್ನ ಪತ್ರಿಕಾ ಹಾದಿಯಲ್ಲಿ ಅವರು ಸಹಕಾರ ನೀಡುತ್ತಾ ಬಂದಿದ್ದಾರೆ.
ಬಿಂಬ ಪ್ರಕಾಶನದ ಮೂಲಕ ಕಾರ್ಕಳ ಮೂಡಬಿದ್ರೆ ಹಾಗೂ ಹೆಬ್ರಿಯಲ್ಲಿ ಮಾಧ್ಯಮ ಬಿಂಬ ಪತ್ರಿಕೆ ಹಾಗೂ ವೆಬ್ ಸೈಟ್, ಸ್ವಯಂ ಟೈಮ್ಸ್ ನ್ಯೂಸ್, ಲೈವ್ ಹಾಗೂ ಸಕಲೇಶಪುರ ಹಾಗೂ ಆಲೂರುನಲ್ಲಿ ಮಲ್ನಾಡ್ ಶ್ಯಾಡೋ ಡಿಜಿಟಲ್ ಮಾಧ್ಯಮ ಮುನ್ನಡೆಸುತ್ತಿದ್ದಾರೆ.