ಉಜಿರೆ.: “ಸಮಾಜದಲ್ಲಿ ಒಳ್ಳೆಯ ಅಭ್ಯಾಸ, ಕೆಟ್ಟಅಭ್ಯಾಸ ಎಂಬ ವರ್ಗೀಕರಣವಿದೆ. ಸಹವಾಸ, ಪ್ರೇರಣೆ, ಮಾಧ್ಯಮ, ಕುತೂಹಲ, ಒತ್ತಡ ಇವೆಲ್ಲ ಕಾರಣಕ್ಕಾಗಿ ಕೆಲವರು ಒಳ್ಳೆಯವರಾಗುತ್ತಾರೆ. ಇನ್ನು ಕೆಲವರು ಕೆಟ್ಟವರಾಗುತ್ತಾರೆ. ಅವರವರ ಮನೋಧರ್ಮದಂತೆ ಪ್ರಾಬಲ್ಯ ಮತ್ತು ದೌರ್ಬಲ್ಯಕ್ಕೆ ಒಳಗಾಗುವುದನ್ನು ಸಮಾಜದಲ್ಲಿ ಗಮನಿಸಬಹುದಾಗಿದೆ. ಮನಸ್ಸಿನ ನಿಯಂತ್ರಣ ಸಾಧಿಸಬಲ್ಲ ಪ್ರತೀಯೊಬ್ಬರು ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ನಿಯಂತ್ರಣ ತಪ್ಪಿದರೆ ವ್ಯಸನಿಗಳಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುವ ನಿಟ್ಟಿನಲ್ಲಿ ಜೀವನ ನಡೆಸುತ್ತಾರೆ. ಇವೆಲ್ಲದರ ಮಧ್ಯೆ ನಿಯತ್ತು ಮತ್ತು ನಿಯಮಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಆದುದರಿಂದ ವ್ಯಸನವೆಂಬುದು ಕೆಟ್ಟ ಅಭ್ಯಾಸ. ಇದರಿಂದದೂರ ನಿಲ್ಲಲು ಸ್ವನಿಯಂತ್ರಣ ಅತ್ಯಗತ್ಯ. ವ್ಯಸನಮುಕ್ತರಾಗಿ ಹೆಮ್ಮೆಯಿಂದ ಬದುಕಬೇಕು. ಸಂಸಾರದಲ್ಲಿ ಬದಲಾದಜೀವನದ  ವೈಶಿಷ್ಟ್ಯತೆಯನ್ನು ಸದಾ ಪಾಲನೆ ಮಾಡುವ ಜವಾಬ್ದಾರಿಯೊಂದಿಗೆ ಬದುಕಬೇಕು”  ಎಂದುಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು. ಅವರು ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 166ನೇ ವಿಶೇಷ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಡಳಿತ ಟ್ರಸ್ಟಿಗಳಾದ ಸುರೇಂದ್ರ ಕುಮಾರ್, ಪೂಜ್ಯರ ಆಪ್ತ ಕಾರ್ಯದರ್ಶಿಗಳಾದ ವೀರು ಶೆಟ್ಟಿ, ಕೆ.ಎಲ್.ಇ ವಿಶ್ವ ವಿದ್ಯಾನಿಲಯ ಧಾರವಾಡ ಇಲ್ಲಿನ ಪ್ರಾಧ್ಯಾಪಕಿ ಶ್ರೀಮತಿ ಸುನಿತಾ ಹಿರೇಮಠ್, ಎ.ಎ. ಸದಸ್ಯರಾದ ಬಾಲು, ರೋಶನಿ ನಿಲಯ ಕಾಲೇಜಿನ ಕ್ರಿಮಿನಾಲಜಿ ಮತ್ತು ಫೊರೊನ್ಸಿಕ್ ಸೈನ್ಸ್ ವಿದ್ಯಾರ್ಥಿ ಶ್ರೀ ಧನುಶ್ ಉಪಸ್ಥಿತರಿದ್ದರು.

ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದಲ್ಲಿ ಕರ್ನಾಟಕರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 50 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಮುಖ್ಯವಾಗಿ ಕೆ.ಪಿ.ಟಿ.ಸಿ.ಎಲ್, ರೈಲ್ವೆ, ನಿವೃತ್ತ ಸೈನಿಕ, ಸರಕಾರಿ ಉದ್ಯೋಗಿಗಳು, ಕೃಷಿಕರು, ಪತ್ರಕರ್ತರು, ಮೆಕ್ಯಾನಿಕ್., ಹೀಗೆ ವಿವಿಧ ಉದ್ಯೋಗದಲ್ಲಿರುವವರು ಭಾಗವಹಿಸಿದ್ದಾರೆ. ರಾಜ್ಯದ ಗದಗ, ದಾವಣಗೆರೆ, ಚಿಕ್ಕನಾಯಕನ ಹಳ್ಳಿಯಲ್ಲಿಯೂ ಸಮುದಾಯ ಶಿಬಿರಗಳು ನಡೆಯುತ್ತಿದೆ. ಜನವರಿ ತಿಂಗಳಿನಲ್ಲಿ 15 ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುವುದು. ಪಾನಮುಕ್ತರಿಗೆ ನವಜೀವನ ಸಮಿತಿಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಪ್ರೇರಣೆ ನೀಡಲಾಗುತ್ತಿದೆಎಂದು ತಿಳಿಸಿದರು. ಶಿಬಿರದಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್, ಮುಖ್ಯ ನಿರ್ವಹಣಾಧಿಕಾರಿಗಳಾದ ಅನಿಲ್ ಕುಮಾರ್, ಮನೋರೋಗ ತಜ್ಞರಾದ ಡಾ| ಅಂಕಿತಾ, ಸಲಹೆಗಾರರಾದ ಸುಮನಾ ಪಿಂಟೋ, ಯೋಗ ಶಿಕ್ಷಕರಾಗಿ ಡಾ. ಅರುಣ್, ವೈದ್ಯಾಧಿಕಾರಿಯಾಗಿಡಾ. ಬಾಲಕೃಷ್ಣ ಭಟ್ ಮತ್ತುಡಾ. ಮೋಹನದಾಸ್ ಗೌಡ, ಯೋಜನಾಧಿಕಾರಿ ಮೋಹನ್, ಶಿಬಿರಾಧಿಕಾರಿ ದಿವಾಕರ ಪೂಜಾರಿ, ಆರೋಗ್ಯ ಸಹಾಯಕ ವೆಂಕಟೇಶ್ ಸಹಕರಿಸಿರುತ್ತಾರೆ. ಮುಂದಿನ ವಿಶೇಷ ಶಿಬಿರವು ದಿನಾಂಕ: 20.12.2021ರಂದು ಪ್ರಾರಂಭಗೊಳ್ಳಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.