ವರದಿ: ಜಯಾನಂದ ಪೆರಾಜೆ
ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಜಾತ್ರಾಮಹೋತ್ಸವದ ಐದನೇ ದಿನ ಮಧ್ಯಾಹ್ನ ಸುಮಾರು 15,000 ಭಕ್ತರು ಅನ್ನಪ್ರಸಾದ ಸ್ವೀಕರಿಸಿ ಸಂತೃಪ್ತಿಪಟ್ಟರು.
ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ಆರಂಭವಾಗಿ ಕುಳಿತು ಊಟ ಮಾಡುವ ಮತ್ತು ಬಫೆಯಲ್ಲಿ ರುಚಿಕರವಾದ ಊಟದ ವ್ಯವಸ್ಥೆ ಮಾಡಲಾಗಿತ್ತು.ಯಾವುದೇ ನೂಕುನುಗ್ಗಲು ಇರಲಿಲ್ಲ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮೇಲುಸ್ತುವಾರಿಯಲ್ಲಿ ಶಿಸ್ತುಬದ್ಧವಾದ ವ್ಯವಸ್ಥೆ ಮಾಡಲಾಗಿತ್ತು.
ಶಾಸಕರ ಭೇಟಿ: ಮಧ್ಯಾಹ್ನ ದೇವಸ್ಥಾನಕ್ಕೆ ಪುತ್ತೂರು ಶಾಸಕ ಅಶೋಕ ಕುಮಾರ್ ರೈ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಅನ್ನಛತ್ರಕ್ಕೆ ತೆರಳಿ ವ್ಯವಸ್ಥೆಯನ್ನು ವೀಕ್ಷಿಸಿ ಸ್ವಚ್ಚತೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸರತಿಸಾಲಿನಲ್ಲಿ ನಿಂತು ಬಫೆ ಊಟ ಸ್ವೀಕರಿಸಿದರು. ಬಳಿಕ ಸ್ವತಃ ಸ್ವಯಂಸೇವಕರ ಜೊತೆ ಸೇರಿ ಅನ್ನ ಬಡಿಸಿ ಗಮನ ಸೆಳೆದರು. ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು.
ಯಾತ್ರಾರ್ಥಿಗಳಿಗೆ ಅನುಕೂಲ
ಜಾತ್ರೆಯ ಸಂದರ್ಭದ ಕಟ್ಟೆ ಸವಾರಿಯಲ್ಲಿ ಸಹಸ್ರಾರು ಮಂದಿ ಭಾಗವಹಿಸುತ್ತಾರೆ. ಜಿಲ್ಲೆ ಮಾತ್ರವಲ್ಲ ಹೊರಜಿಲ್ಲೆಗಳಾದ ಮೈಸೂರು, ಮಂಡ್ಯ ಜಿಲ್ಲೆಗಳಿಂದಲೂ ಹೊರೆಕಾಣಿಕೆ ಬಂದಿದೆ.
ಎರಡು ವರ್ಷಗಳಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ವನ್ನು ಪ್ರಸಿದ್ಧ ಯಾತ್ರಾಸ್ಥಳವನ್ನಾಗಿ ಮಾರ್ಪಡಿಸಲಾಗುವುದು ಎಂದು ಸುದ್ದಿಗಾರರೊಂದಿಗೆ ಮತನಾಡುತ್ತಾ ತಿಳಿಸಿದರು. ಅಕ್ರಮವಾಗಿದ್ದ ಸ್ಥಳವು ಮಹಾಲಿಂಗೇಶ್ವರ ದೇವರಿಗೆ ಸಮರ್ಪಣೆಯಾಗಿದೆ. ಇನ್ನಷ್ಟು ಜಾಗ ದೇವಸ್ಥಾನಕ್ಕೆ ಮುಂದಿನ ದಿನಗಳಲ್ಲಿ ಸೇರಲಿದೆ.ಯಾತ್ರಾರ್ಥಿಗಳಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಡಲಾಗುವುದು ಎಂದರು. ಪ್ರತಿದಿನ ಸಹಸ್ರಾರು ಭಕ್ತರು ಬರುವಂತಾಗಬೇಕು. ಪ್ರಸಿದ್ಧವಾದ ಕೆರೆಯನ್ನು ಸಂರಕ್ಷಿಸಿ ಭೋಜನಾ ಶಾಲೆ, ವಸತಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಾಗಲಿವೆ ಎಂದರು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಪ್ರಸಿದ್ಧ ಕ್ಷೇತ್ರವಾಗಲಿವೆ ಎಂದರು.