ಸುಳ್ಯ: ಕೇಂದ್ರ ಸರ್ಕಾರದ ರಸ್ತೆ ಹಾಗೂ ಮೂಲಸೌಕರ್ಯ ನಿಧಿ (ಸಿಆರ್ ಐಎಫ್) ಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರದ ಎರಡು ಪ್ರಮುಖ ರಸ್ತೆಗಳನ್ನು ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ  ಗುದ್ದಲಿಪೂಜೆ ನೆರವೇರಿಸಲಾಯಿತು.

ಸಿಆರ್ ಐಎಫ್ ಅನುದಾನದಡಿ ಸುಳ್ಯ ತಾಲೂಕಿನ ನಿಂತಿಕಲ್ಲು- ಬೆಳ್ಳಾರೆ ರಸ್ತೆಯನ್ನು ಸುಮಾರು 3.72 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ರಸ್ತೆಯಲ್ಲಿ ಒಟ್ಟು ಸುಮಾರು 6.20 ಕಿಮೀ. ಮಾರ್ಗವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಕಾಮಗಾರಿಗಳಿಗೆ ಮಂಗಳವಾರ ಸಂಸದ ಕ್ಯಾ. ಚೌಟ ಅವರು ನಿಂತಿಕಲ್ಲು ಜಂಕ್ಷನ್ ನಲ್ಲಿ ಗುದ್ದಲಿಪೂಜೆ ನೆರವೇರಿಸಿದ್ದಾರೆ. ಅದೇ ರೀತಿ ಕೇಂದ್ರ ಸರ್ಕಾರದ ಸಿಆರ್ ಐಎಫ್ ನಿಧಿಯಡಿ ಸುಳ್ಯ-ಪೈಚಾರ್-ಬೆಳ್ಳಾರೆಯ ರಸ್ತೆಯು 2.28 ಕೋಟಿ. ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಈ ರಸ್ತೆಯು ಒಟ್ಟು 3.80 ಕಿ.ಮಿ ಉನ್ನತಿಕರಣಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಇಂದು ನಿಂತಿಕಲ್ಲಿನಲ್ಲಿ ಕ್ಯಾ. ಚೌಟ ಅವರ ನೇತೃತ್ವದಲ್ಲಿ ಕಾಮಗಾರಿ ಆರಂಭಿಸುವುದಕ್ಕೆ ಗುದ್ದಲಿಪೂಜೆ ನೆರವೇರಿಸಲಾಗಿದೆ.

ನಿಂತಿಕಲ್ಲು ಪುತ್ತೂರು-ಸುಳ್ಯವನ್ನು ಸಂಪರ್ಕಿಸುವ ಗಡಿಭಾಗವಾಗಿದ್ದು, ಸುಳ್ಯ-ಪೈಚಾರ್-ಬೆಳ್ಳಾರೆ- ನಿಂತಿಕಲ್ಲು ರಸ್ತೆ ಅಭಿವೃದ್ಧಿಗೊಂಡರೆ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸಿ, ಈ ಪ್ರದೇಶದ ಒಟ್ಟಾರೆ ಸಂಪರ್ಕ ಜಾಲವನ್ನು ಬಲಪಡಿಸುತ್ತದೆ. ಜೊತೆಗೆ  ಪುತ್ತೂರು, ಸುಬ್ರಹ್ಮಣ್ಯ , ಮಂಗಳೂರು, ಮಡಿಕೇರಿ ಸಂಪರ್ಕ ಸಾಧಿಸಲು ಈ ರಸ್ತೆ ಸಹಾಯವಾಗಿದೆ.

ಈ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ಬಿಜೆಪಿ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ಪಂಚಾಯತ್ ಅಧ್ಯಕ್ಷರು, ಅಧಿಕಾರಿಗಳು ಬಿಜೆಪಿ ಸ್ಥಳೀಯ ಮುಖಂಡರು ಮತ್ತು ಸ್ಥಳೀಯರು ಕಾರ್ಯಕ್ರಮದ ವೇಳೆ ಉಪಸ್ಥಿತರಿದ್ದರು.