ಮಂಗಳೂರು: ಬಾಬಾ ಸಾಹೇಬ್ ಅಂಬೇಡ್ಕರ್ ಯುವಜನಾಂಗಕ್ಕೆ ಮಾದರಿ. ಅಂಬೇಡ್ಕರ್ ಬಹಳ ಕಷ್ಟ ಪಟ್ಟು ಓದಿ ಸಮಾಜಕ್ಕೆ ಬೆಳಕಾದವರು, ಅದೇ ರೀತಿ ಕೂಡ ನಾವು ಪಡೆದುಕೊಂಡ ಶಿಕ್ಷಣ ಸಮಾಜಕ್ಕೆ ಅನುಕೂಲಕರವಾಗಿರಬೇಕು, ಎಂದು ದಕ್ಷಿಣ ಕನ್ನಡ ನೆಹರು ಯುವ ಕೇಂದ್ರ ಸಂಘಟನೆಯ ಪೂರ್ವತನ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ ಪೇಟೆ ಹೇಳಿದರು.
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು, ಇಲ್ಲಿ ಜರುಗಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ಪಡೆದುಕೊಳ್ಳಲು ಬಡತನ ಎಂದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆಅಂಬೇಡ್ಕರ್ ಮಾದರಿ. ಶ್ರೇಷ್ಠವ್ಯಕ್ತಿಗಳ ಸಾಧನೆಗಳನ್ನು ಅಭ್ಯಸಿಸಿ, ಅಳವಡಿಸಿಕೊಂಡರೆ ಯುವಕರು ಸಮಾಜವನ್ನು ಉತ್ತಮ ಮಾರ್ಗದೆಡೆಗೆ ಕೊಂಡೊಯ್ಯಬಲ್ಲರು, ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೋ. ಗಣಪತಿ ಗೌಡ ಮಾತನಾಡಿ, ಅಂಬೇಡ್ಕರ್ ತಮ್ಮ ಅಗಾಧವಾದ ಪಾಂಡಿತ್ಯದ ಮೂಲಕ ಪ್ರಪಂಚದಲ್ಲಿಯೇ ಶ್ರೇಷ್ಟ ಸಂವಿಧಾನವನ್ನು ನಿರ್ಮಿಸಿದ್ದಾರೆ. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಅಂಬೇಡ್ಕರ್ ಪ್ರಯತ್ನಪಟ್ಟಿದ್ದಾರೆ. ʼಹೋರಾಟ ಮಾಡದಿದ್ದರೂ ಪರವಾಗಿಲ್ಲ ಮಾರಾಟವಾಗಬೇಡʼ ಎಂದು ಅಂಬೇಡ್ಕರ್ ಹೇಳಿದ್ದರು, ಎಂದರು.
ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಕುರಿತು ವಿಚಾರ ಮಂಡಿಸಿದರು. ಸಂಚಾಲಕ ಪ್ರೊ. ರಾಮಕೃಷ್ಣ ಬಿ.ಎಂ, ಗ್ರಂಥಪಾಲಕಿ ಡಾ. ವನಜಾ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ. ಸುರೇಶ್ ಮತ್ತು ಡಾ. ಗಾಯತ್ರಿ ಎನ್, ಆಂತರಿಕ ಗುಣಮಟ್ಟ ಖಾತರಿಕೋಶದ ಡಾ. ಸಿದ್ದರಾಜು ಎಂ.ಎನ್ ಮೊದಲಾದವರು ಉಪಸ್ಥಿತರಿದ್ದರು.