ಮಂಗಳೂರು: ಭಾರತವನ್ನು ಎಲ್ಲಾ ರೀತಿಯ ತಾರತಮ್ಯಗಳಿಂದ ಮುಕ್ತಗೊಳಿಸಲು ಕೆಲಸ ಮಾಡುವುದು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಏಕೈಕ ಸತ್ಯ ಮಾರ್ಗವಾಗಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಹೇಳಿದರು.

ಮಂಗಳವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಡೆದ  ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಅವರು ಮಾತನಾಡುತ್ತಿದ್ದರು. 

ಅಂಬೇಡ್ಕರ್ ಅವರು ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ದಲಿತರು ಹಾಗೂ ಕೆಳಜಾತಿಗಳ ಹಕ್ಕುಗಳಿಗಾಗಿ ಹೋರಾಡಿದರು. ಭಾರತದ ಸಂವಿಧಾನವನ್ನು ರಚಿಸುವ ವೇಳೆ ತುಳಿತಕ್ಕೆ ಒಳಗಾದ, ಸಾಮಾಜಿಕ ನ್ಯಾಯ ವಂಚಿತ ಮತ್ತು ಅವಕಾಶ ವಂಚಿತರಿಗಾಗಿ ವಿಶೇಷ ಕಾಳಜಿವಹಿಸಿ ಗಮನಾರ್ಹ ಕೊಡುಗೆ ನೀಡಿದರು. ದೇಶದಲ್ಲಿ ಎಲ್ಲಾ ಬಗೆಯ ತಾರತಮ್ಯಗಳನ್ನು ಇಲ್ಲವಾಗಿಸುವತ್ತ ಕಾರ್ಯೋನ್ಮುಖರಾಗುವುದು ಅಂಬೇಡ್ಕರ್ ಅವರಿಗೆ ನಿಜವಾಗಿ ಗೌರವ ಸಲ್ಲಿಸಿದಂತೆ ಎಂದು ಸ್ಮರಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಮಾತನಾಡಿ, ಈ ದೇಶದ ಅವಮಾನಿತ ನೆಲೆಯಿಂದ ಮೇಲೆದ್ದು ಬಂದ ಅಂಬೇಡ್ಕರ್ ಅವರು ಅಸ್ಪೃಶ್ಯತೆ, ಬಡತನ, ದಾರಿದ್ರಗಳನ್ನು ಕಿತ್ತೊಗೆಯಲು ಹಗಲಿರುಳೂ ಶ್ರಮಿಸಿದ್ದಲ್ಲದೆ, ಭಾರತಕ್ಕೊಂದು ಜಾತ್ಯತೀತ ಭದ್ರ ಬುನಾದಿ ನಿರ್ಮಿಸಿದ ಮಹಾನ್ ಚಿಂತಕ. ಸ್ವಾತಂತ್ರ್ಯದ ನಿಜಾರ್ಥವನ್ನು ಸಮಾನತೆ, ಭ್ರಾತೃತ್ವದ ಮೌಲ್ಯವನ್ನು ಮನವರಿಕೆ ಮಾಡಿದವರಲ್ಲಿ ಪ್ರಥಮರು, ಬಹುಸಂಖ್ಯಾತ ದಲಿತ ಶೋಷಿತ ವರ್ಗಗಳನ್ನು ಸಮಾನದ ಮುಖ್ಯವಾಹಿನಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಜೋಕ್ಕಿಂ ಡಿಸೋಜಾ, ಬಿ.ಎಂ.ಅಬ್ಬಾಸ್ ಸಲಿ, ಪುರುಷೋತ್ತಮ ಚಿತ್ರಾಪುರ, ಅಬ್ದುಲ್ ರವೂಫ್, ಲತೀಫ್ ಕಂದಕ್, ಕೇಶವ ಮರೋಳಿ, ಸಂತೋಷ್ ಕುಮಾರ್ ಶೆಟ್ಟಿ, ಶುಭೋದಯ ಆಳ್ವ, ಟಿ.ಕೆ.ಸುಧೀರ್,  ಸಬಿತಾ ಮಿಸ್ಕಿತ್, ಅಲ್ತಾಫ್ ಸುರತ್ಕಲ್, ಟಿ.ಹೊನ್ನಯ್ಯ, ಪ್ರಕಾಶ್ ಆಲ್ವಿನ್, ಸಿ.ಎಂ ಮುಸ್ತಫಾ, ಮೊಹಮ್ಮದ್ ಬಪ್ಪಳಿಗೆ, ಸಲೀಂ ಪಾಂಡೇಶ್ವರ, ಅಬ್ದುಲ್ ರಹಿಮಾನ್ ಪಡ್ಪು, ಹುಸೈನ್ ಕಾಟಿಪಳ್ಳ,  ಶರೀಫ್ ಮೇಗಿಲಪದವು, ಯೋಗೀಶ್ ನಾಯಕ್, ಮಲ್ಲಿಕಾರ್ಜುನ ಕೋಡಿಕಲ್, ರಘು ಪೂಜಾರಿ, ಅಬ್ದುಲ್ ರಹಿಮಾನ್ ವೀರಕಂಬ, ಕೃಷ್ಣಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.