ಮಂಗಳೂರು: ಎರಡನೇ ವರ್ಷದ ಸುರ್ ಸೊಭಾಣ್ ಗಾಯನ ತರಬೇತಿಯ ಗ್ರೇಡ್ I ಮತ್ತು ಗ್ರೇಡ್ I I ವರ್ಗಗಳ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನೆರವೇರಿತು. ಹಿರಿಯ ಗಾಯಕಿ ಜೊಯ್ಸ್ ಒಝೇರಿಯೊ ಅಬ್ಬಲಿಗೆ ಹೂವಿನ ಬುಟ್ಟಿಯಿಂದ ಪಾಠ ಪುಸ್ತಕಗಳನ್ನು ತೆಗೆದು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ``ನಾವು ಸಣ್ಣವರಿರುವಾಗ ನಮ್ಮಲ್ಲಿ ಪ್ರತಿಭೆಯಿದ್ದರೂ ತರಬೇತಿ ಪಡೆಯುವ ಅವಕಾಶಗಳಿರಲಿಲ್ಲ. ಹಾಗಾಗಿ ಸ್ವಪ್ರಯತ್ನದಿಂದಲೇ ಕಲಿಯಬೇಕಾಯಿತು. ಆದರೆ ಇಂದು ತರಬೇತಿ ಇಲ್ಲದಿದ್ದರೆ ಯಾವುದೇ ಪ್ರತಿಭೆ ಅರಳಲು ಕಷ್ಟ. ಇಂತಹ ಸಂದರ್ಭದಲ್ಲಿ ಸುರ್ ಸೊಭಾಣ್ ತರಬೇತಿಯ ಅಗತ್ಯ ಮನದಟ್ಟಾಗುತ್ತದೆ. ವ್ಯವಸ್ಥಿತವಾಗಿ ಮಾಂಡ್ ಸೊಭಾಣ್ ನಿಮಗೆ ತರಬೇತಿ ನೀಡುತ್ತಿದೆ. ಅದರ ಪ್ರಯೋಜನ ಪಡೆಯಿರಿ. ನಿಮ್ಮಿಂದ ಕೊಂಕಣಿಗೆ ಉನ್ನತ ಗಾಯಕ ಗಾಯಕಿಯರು ಲಭಿಸಲಿ’’ ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಶಿಕ್ಷಕಿ ಶಿಲ್ಪಾ ತೇಜಸ್ವಿನಿ ಕುಟಿನ್ಹಾ, ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಸುಮೇಳ್ ಸಂಯೋಜಕಿ ರೈನಾ ಸಿಕ್ವೇರಾ ಉಪಸ್ಥಿತರಿದ್ದರು. ಕೇರನ್ ಮಾಡ್ತಾ ನಿರೂಪಿಸಿದರು.
ಸುರ್ ಸೊಭಾಣ್ ಕೊಂಕಣಿಯಲ್ಲಿ ಶಾಸ್ತ್ರೀಯ ಗಾಯನ ತರಬೇತಿಗೆ ಮಾಂಡ್ ಸೊಭಾಣ್ ಕೊಡುಗೆ. ಈ ಸಾಲಿನಲ್ಲಿ ಎರಡು ಗ್ರೇಡ್ ಗಳಲ್ಲಿ 102 ವಿದ್ಯಾರ್ಥಿಗಳಿದ್ದಾರೆ. ವರ್ಷವಿಡೀ ಪ್ರತಿ ಭಾನುವಾರ ಅಭ್ಯಾಸ ನಡೆಯುತ್ತದೆ. ತಮ್ಮ ತರಬೇತಿಯ ಕೊನೆಯಲ್ಲಿ ಸಾರ್ವಜನಿಕವಾಗಿ ಕಾರ್ಯಕ್ರಮ ನೀಡುವರು. ಸೂಕ್ತ ಹಾಜರಾತಿ ಇದ್ದು, ಪರೀಕ್ಷೆ ಬರೆದು ತೇರ್ಗಡೆ ಹೊಂದಿದವರಿಗೆ ಪ್ರಮಾಣ ಪತ್ರ ಲಭಿಸಲಿದೆ.
ಬೊಂಕೆತ್ ನಾಟಕ ಮತ್ತು `ರಿಕ್ಷಾ ಡೈರಿ’ ಇ-ಬುಕ್ ಲೋಕಾರ್ಪಣೆ :
ನಂತರ ನಡೆದ 282 ನೇ ತಿಂಗಳ ವೇದಿಕೆ ಕಾರ್ಯಕ್ರಮದಲ್ಲಿ ಎರಿಕ್ ಒಝೇರಿಯೊ ಅವರು ರೊನಿ ಅರುಣ್ ಬರೆದು ಮಾಂಡ್ ಸೊಭಾಣ್ ಪ್ರಕಟಿಸಿದ ಲೇಖನಗಳ ಸಂಗ್ರಹ `ರಿಕ್ಷಾ ಡೈರಿ’ ಪುಸ್ತಕದ ಇ-ಬುಕ್ ಆವೃತ್ತಿಯನ್ನು ಲೊಕಾರ್ಪಣೆಗೊಳಿಸಿದರು. ಇ-ಬುಕ್ ಅನ್ನು ಸಾಫ್ಟ್ ವೇರ್ ತಜ್ಞ ಕೇರನ್ ಮಾಡ್ತಾ ವಿನ್ಯಾಸಗೊಳಿಸಿದ್ದಾರೆ. ಎಲ್ರೊನ್ ರೊಡ್ರಿಗಸ್ ನಿರೂಪಿಸಿದರು.
ನಟ, ನಿರ್ವಾಹಕ ಮತ್ತು ಸಂಘಟಕ ರೋಶನ್ ಕಾಮತ್ ವಾಮಂಜೂರ್ ಇವರು ಗಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಲಾವಣೆ ನೀಡಿದ ಬಳಿಕ ಅರುಣ್ ರಾಜ್ ರೊಡ್ರಿಗಸ್ ಬರೆದು ನಿರ್ದೇಶನ ನೀಡಿದ `ಬೊಂಕೆತ್’ ನಾಟಕ ಪ್ರದರ್ಶನಗೊಂಡಿತು. ಮೈಕಲ್ ಡಿಸೋಜ ಸಹ ಪ್ರಾಯೋಜಿತ ಕಲಾಕುಲ್ ನಾಟಕ ರೆಪರ್ಟರಿಯ ವಿದ್ಯಾರ್ಥಿಗಳಾದ ಅನಿಷಾ, ಆಶ್ಲಿ, ಡಾರ್ವಿನ್, ರೊಯ್ಸ್ಟನ್, ವಿಜೊಯ್, ವಿನೊಯ್, ವಿಲ್ಟನ್ ಇವರುಗಳು ನಟಿಸಿದರು. ವಿಕಾಸ್ ಕಲಾಕುಲ್ ಬೆಳಕು ಸಂಯೋಜನೆ ಹಾಗೂ ಸಂದೀಪ್ ಕಲಾಕುಲ್ ಸಂಗೀತದಲ್ಲಿ ಸಹಕಾರ ನೀಡಿದರು.