ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ಕುಂಜತ್ತ್‍ಬೈಲ್‍ನಲ್ಲಿ ನಿರ್ಮಾಣಗೊಳ್ಳುತ್ತಿರುವ ವಸತಿ ಲೇಔಟ್‍ನಲ್ಲಿ ಮೂಲ ಸೌಲಭ್ಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಜನಾಕರ್ಷಣೆಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಅವರು ಸೋಮವಾರ ಕುಂಜತ್ತ್‍ಬೈಲ್ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದರು.
ಬಡಾವಣೆಯಲ್ಲಿ ಉದ್ಯಾನವನ, ದಾರಿದೀಪ ಸೇರಿದಂತೆ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಬೇಕು. ನಿವೇಶನಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಅರಿವು ಮತ್ತು ಮಾಹಿತಿ ನೀಡುವಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲಾ ಕಡೆ ಈ ಬಗ್ಗೆ ಪ್ರಚಾರಪಡಿಸಬೇಕು ಎಂದು ಅವರು ಸೂಚಿಸಿದರು.
ಕುಂಜತ್ತಬೈಲ್‍ಬಡಾವಣೆಯಲ್ಲಿ ಆಧುನಿಕ ಸೌಲಭ್ಯಗಳು ದೊರಕುವಂತೆ ಅಭಿವೃದ್ಧಿಪಡಿಸಬೇಕು. ನಗರಾಭಿವೃದ್ಧಿ ಪ್ರಾಧಿಕಾರವು ಈ ಬಗ್ಗೆ ಹೆಚ್ಚು ಒತ್ತು ನೀಡಿ ಬಡಾವಣೆಯನ್ನು ನಿರ್ಮಿಸಬೇಕು ಎಂದು ಅವರು ತಿಳಿಸಿದರು. ಕುಂಜತ್ತಬೈಲ್ ಬಡಾವಣೆಯ ನಿವೇಶನ ಮಾರಾಟದಿಂದ ಬಂದ ಹಣದಲ್ಲಿ ನಗರದ ಇನ್ನೊಂದು ಕಡೆ ಬಡಾವಣೆಯನ್ನು ಅಭಿವೃದ್ಧಿಗೊಳಿಸುವಂತೆ ಸಚಿವರು ತಿಳಿಸಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಅವರು ಸಚಿವರಿಗೆ ಮಾಹಿತಿ ನೀಡಿ, ಈ ಬಡಾವಣೆಯಲ್ಲಿ 208 ನಿವೇಶನಗಳಿವೆ. ಈಗಾಗಲೇ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದ್ದು, ನವೆಂಬರ್ 18 ಕೊನೆಯ ದಿನವಾಗಿರುತ್ತದೆ ಎಂದು ತಿಳಿಸಿದರು. ಸಾರ್ವಜನಿಕರಿಗೆ ಅತಿ ಕಡಿಮೆ ದರದಲ್ಲಿ ನಿವೇಶನ ಲಭ್ಯವಾಗಲು ಸೈಟ್ ದರವನ್ನು ಕಡಿಮೆಗೊಳಿಸಲಾಗಿದೆ ಎಂದು ಹೇಳಿದರು.
ಸಚಿವರು ನಂತರ ಕೊಣಾಜೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೂಡಾ ವಸತಿ ಬಡಾವಣೆಗೆ ಭೇಟಿ ನೀಡಿದರು.
ಈ ಸಂದರ್ಭ ಜಿಲ್ಲಾಧಿಕಾರಿ ದರ್ಶನ್‍ಹೆಚ್.ವಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಜೀರ್, ಮೂಡಾ ಸದಸ್ಯರು ಉಪಸ್ಥಿತರಿದ್ದರು.
ಉರ್ವಾ ಮಾರ್ಕೆಟ್ ಕಟ್ಟಡ ಭೇಟಿ:
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಉರ್ವಾ ನೂತನ ಮಾರುಕಟ್ಟೆ ಕಟ್ಟಡಕ್ಕೆ ಭೇಟಿ ನೀಡಿದರು.

ಮಾರುಕಟ್ಟೆ ಕಟ್ಟಡದ ಒಳಗೆ ಹೋದ ಸಚಿವರು ಅಂಗಡಿ ಕೋಣೆಗಳು, ಮೀನು-ಮಾಂಸ ಮಾರಾಟ ಕೇಂದ್ರಗಳನ್ನು ವೀಕ್ಷಿಸಿದರು. ಮಾರುಕಟ್ಟೆ ಕಟ್ಟಡದಲ್ಲಿ ಅತಿ ಶೀಘ್ರವೇ ಚಟುವಟಿಕೆಗಳನ್ನು ಪುನರಾರಂಭಿಸಬೇಕು. ಅಂಗಡಿ ಕೋಣೆಗಳನ್ನು ಮಳಿಗೆದಾರರಿಗೆ ಹಸ್ತಾಂತರಿಸಬೇಕು. ವರ್ತಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ನಗರಪಾಲಿಕೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಅಗತ್ಯವಿದ್ದರೆ ಟೆಂಡರ್ ಶರತ್ತುಗಳನ್ನು ಸಡಿಲಗೊಳಿಸಬೇಕು. ತಾತ್ಕಾಲಿಕ ಮಾರುಕಟ್ಟೆಯಲ್ಲಿರುವ ಎಲ್ಲಾ ಮಳಿಗೆಗಳನ್ನು ನೂತನ ಮಾರುಕಟ್ಟೆಗೆ ಸ್ಥಳಾಂತರಿಸಬೇಕು ಎಂದು ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.