ಮುಂಬಯಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ನೂತನ ಅಧ್ಯಕ್ಷರಾಗಿ ಬಿಲ್ಲವ ಯುವ ಧುರೀಣ ಸೂರ್ಯಕಾಂತ್ ಜೆ. ಸುವರ್ಣ ಆಯ್ಕೆಯಾಗಿದ್ದಾರೆ. ಕಳೆದ ಭಾನುವಾರ (ಅ.25) ಮೂಲ್ಕಿ ಅಲ್ಲಿನ ಜಯ ಸಿ. ಸುವರ್ಣ ಸಭಾಗೃಹದಲ್ಲಿ ಜರಗಿದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ವಾರ್ಷಿಕ ಮಹಾಸಭೆಯಲ್ಲಿ ಸಭೆಯು ಸರ್ವಾನುಮತದಿಂದ ಆಯ್ಕೆಗೊಳಿಸಿತು. ಈ ಹಿಂದೆ ರಾಷ್ಟ್ರೀಯ ಬಲ್ಲವರ ಮಹಾಮಂಡಲದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‍ನ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸೂರ್ಯಕಾಂತ್ ಜೆ. ಸುವರ್ಣ:
ವಿಶ್ವಪ್ರಸಿದ್ಧ ಬಿಲ್ಲವ ಧುರೀಣ, ಸಮಾಜ ಸೇವಕ, ಹಣಕಾಸು ತಜ್ಞ ಜಯ ಸಿ.ಸುವರ್ಣ ಮತ್ತು ಲೀಲಾವತಿ ಜಯ ಸುವರ್ಣ ಅವರ ಹೆಮ್ಮೆಯ ಸುಪುತ್ರ ಸೂರ್ಯಕಾಂತ್ ಸುವರ್ಣ ಆಗಿದ್ದು ನಾಲ್ವರು ಸಹೋದರರಾದ ಸುಭಾಷ್, ದಿನೇಶ್, ಯೋಗೇಶ್ ಅವರಲ್ಲಿ ಹಿರಿಯರಾಗಿದ್ದಾರೆ. ಸದ್ಯ ಅವಿರತ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದು ಪಂಚಗಣಿ ಅಲ್ಲಿನ ಬೋರ್ಡಿಂಗ್ ಶಾಲೆಯಲ್ಲಿ ಸೂರ್ಯಕಾಂತ್ ಪ್ರಾರ್ಥಮಿಕ ಶಿಕ್ಷಣ ಪೂರೈಸಿ ಮುಂಬಯಿ ಅಂಧೇರಿಯಲ್ಲಿ ಎಂವಿವಿಎಲ್ ಕಾಲೇಜ್‍ನಲ್ಲಿ ಉನ್ನತ ಶಿಕ್ಷಣವನ್ನು ಪಡೆದ ಅಮೇರಿಕಾ (ಯುಎಸ್‍ಎ) ಅಲ್ಲಿನ ಡಲ್ಲಾಸ್‍ನಲ್ಲಿ ವಾಣಿಜ್ಯ ಪೈಲಟ್ ತರಬೇತಿ ಪಡೆದಿರುವರು. ಜಯ ಸುವರ್ಣರ ಅಗಲಿಕೆಯ ನಂತರ, ಸೂರ್ಯಕಾಂತ್ ತನ್ನ ತಂದೆಯ ಸಾಮಾಜಿಕ ಮತ್ತು ವೈಯಕ್ತಿಕ ವ್ಯವಹಾರದ ಜವಾಬ್ದಾರಿ ಹೊತ್ತು ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ನಿಶಿತಾ ಸುವರ್ಣ ಅವರನ್ನು ವರಿಸಿದ್ದು, ವಾಮಿಕಾ ಮತ್ತು ವರಿಷ್ಠ್ ಸುವರ್ಣ ಎಂಬ ಇಬ್ಬರು ಮಕ್ಕಳೊಂದಿಗೆ ಸುಖ ಸಂಸಾರದೊಂದಿಗೆ ಗೋರೆಗಾಂವ್‍ನಲ್ಲಿ ವಾಸವಾಗಿದ್ದಾರೆ.
ಶ್ರೀ ಗೋಕರ್ಣನಾಥ ಅಭಿವೃದ್ಧಿ ಸಮಿತಿ ಸದಸ್ಯರು, ಕುದ್ರೋಳಿ ಶ್ರೀ ನಾರಾಯಣ ಗುರು ಶಾಲಾ ಸಮಿತಿ ಟ್ರಸ್ಟಿ, ಕಾಪು ಹೊಸ ಮಾರಿಗುಡಿ ಮುಂಬಯಿ ಸಮಿತಿ ಉಪಾಧ್ಯಕ್ಷರು ಹಾಗೂ ಹತ್ತು ಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿ ಆಗಿ ಸೇವೆ ಸಲ್ಲಿಸುತ್ತಿದ್ದು ಸೂರ್ಯಕಾಂತ್ ಅವರು ತಮ್ಮ ಸುವರ್ಣ ಪರಂಪರೆಯ ಮತ್ತು ತಂದೆಯ ಸೇವಾ ಪ್ರತಿಷ್ಠೆಯನ್ನು ಸಮಾಜಕ್ಕೆ ಮರಳಿ ನೀಡುವ ಉದ್ದೇಶಹೊಂದಿ ಮುನ್ನಡೆಯುತ್ತಿದ್ದಾರೆ.
ತಂದೆ ಸ್ವರ್ಗೀಯ ಜಯ ಸಿ.ಸುವರ್ಣ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ. 2011ರಿಂದ ಸತತ ಒಂಬತ್ತು ವರ್ಷಗಳಿಂದ ವಿಶ್ವದ ಪ್ರತಿಷ್ಠಿತ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವೋಭ್ಯುದಯ ಉಪಸಮಿತಿಯಲ್ಲಿ ಹಾಗೂ 2013 ರಿಂದ ಭಾರತ್ ಬ್ಯಾಂಕ್‍ನ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವರು. ಸೂರ್ಯ, ತಂದೆಯ ಸ್ಮರಣೆಗಾಗಿ ಮೂಲ್ಕಿಯಲ್ಲಿ ಜಯ ಸಿ.ಸುವರ್ಣ ರೋಟರಿ ಕ್ಲಬ್ ಚಿಲ್ಡನ್ ಪಾರ್ಕ್ ಸ್ಥಾಪಿಸಿದ್ದಾರೆ. ಶ್ರೀ ನಾರಾಯಣಗುರು ಇಂಗ್ಲಿಷ್ ಮೀಡಿಯಂ ಸ್ಕೂಲ್ ಮೂಲ್ಕಿ ಟ್ರಸ್ಟಿಯಾಗಿ, ದೇಯಿ ಬೈದೆತಿ, ಕೋಟಿ ಚೆನ್ನಯರ ಮೂಲಸ್ಥಾನ ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲ್ ಟ್ರಸ್ಟಿ ಆಗಿ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಇದರ ಅಭಿವೃದ್ಧಿ ಸಮಿತಿ ಸದಸ್ಯರಾಗಿ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಮುಂಬಯಿ ಸಮಿತಿ ಉಪಾಧ್ಯಕ್ಷರಾಗಿ, ಜಯ ಲೀಲಾ ಪ್ರೈವೇಟ್ ಲಿಮಿಟೆಡ್‍ನ ನಿರ್ದೇಶಕರಾಗಿ, ಜಯಲೀಲಾ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್‍ನ ಟ್ರಸ್ಟಿಯಾಗಿ, ರಾಧಾಲೀಲಾ ಚಾರಿಟೆಬಲ್ ಟ್ರಸ್ಟ್‍ನ ಟ್ರಸ್ಟಿ ಯಾಗಿ, ಮಲಾಡ್ ಕುರಾರ್ ಶನೀಶ್ವರ ದೇವಸ್ಥಾನದ ಗೌರವಾಧ್ಯಕ್ಷ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ, ರೈನ್ ಬೋ ಬುಡೊಕನ್ ಕರಾಟೆ ಅಕಾಡೆಮಿ ಹಾಗೂ ಮಹಾರಾಷ್ಟ್ರ ಕರ್ನಾಟಕದ ತುಳು ಕನ್ನ ಡಿಗರ ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಅವರ ಸೇವೆಯನ್ನು ಪರಿಗಣಿಸಿ ಗೌರವಿಸಿವೆ.
ನನ್ನ ಕುಲದೇವರು, ಕೋಟಿ-ಚೆನ್ನಯ, ಬ್ರಹ್ಮಶ್ರೀ ನಾರಾಯಣ ಗುರು ಅವರ ಶುಭಾಶೀರ್ವಾದದಿಂದ ಸೇವಾಭಾಗ್ಯದ ಮಹತ್ವದ ಜವಾಬ್ದಾರಿ ಪ್ರಾಪ್ತಿಸಿದ್ದು ಈ ಸ್ಥಾನಮಾನ ಒದಗಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಮಾತಾಪಿತರ ಆಶೀರ್ವಾದ, ಪ್ರೇರಣೆ ಹಾಗೂ ಮಾರ್ಗದರ್ಶನದಿಂದ ಸಮಾಜದ ಸೇವೆ ಮಾಡಲು ಅವಕಾಶ ದೊರೆತಿದೆ. ಈ ಜವಾಬ್ದಾರಿಯುತ ಅವಕಾಶವನ್ನು ನಿಷ್ಠಾವಂತನಾಗಿ ಸದುಪಯೋಗಪಡಿಸಿಕೊಂಡು ಸಮಾಜ ಸೇವೆಯೆ ಋಣ ಪೂರೈಸುವೆ ಎಂದು ಸೂರ್ಯಕಾಂತ್ ತಿಳಿಸಿದ್ದಾರೆ.