ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿನ ಅವ್ಯವಸ್ಥೆಯ ವಿರುದ್ಧ ಹೋರಾಡಿದವರು ಶೂದ್ರರನ್ನು ಅಸ್ಪೃಶ್ಯರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಿದವರು ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ಅವರು ಮಂಗಳವಾರ ಗೋಕರ್ಣನಾಥ ಕಾಲೇಜಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಗೋಕರ್ಣನಾಥಕ್ಷೇತ್ರ ಕೂದ್ರೋಳಿ, ಗೋಕರ್ಣನಾಥೆಶ್ವರ ಕಾಲೇಜು ಇವರ ಸಹಯೋಗದೊಂದಿಗೆ ನಡೆದ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಸಮಾನತೆಯನ್ನು ತರುವ ಚಿಂತನೆಯಿಂದ ಅವರು ಸಮಾಜದಲ್ಲಿ ಅಸ್ರಶ್ಯತೆಯ ಸಂಪೂರ್ಣ ನಿರ್ಮೂಲನೆಗಾಗಿ ಹಲವಾರು ಬದಲಾವಣೆಯನ್ನು ತಂದರು. ಮೇಲ್ವರ್ಗದ ಜನರ ದೇವಾಲಯಗಳಿಗೆ ನಿಷಿದ್ಧ ಇದ್ದ ಕಾರಣ ಶೂದ್ರರಿಗಾಗಿ ದೇವಾಲಯಗಳನ್ನು ಕಟ್ಟಿಸಿದರು. ಸುಮಾರು ನೂರು ವರ್ಷಗಳ ಹಿಂದೆಯೇ ಮಹಿಳಾ ಶಿಕ್ಷಣವನ್ನು ಪ್ರೋತ್ಸಾಹಿಸಿದರು. ಜೀವನದಲ್ಲಿ ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗೆ ಆಸಕ್ತಿ ಕೊಡುತ್ತಾ ಅಧ್ಯಯನಗಳಲ್ಲಿ ತೊಡಗಿ ಸಮಾಜವನ್ನುಉತ್ತಮದಾರಿಗೆ ಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದರು.
ಗೋಕರ್ಣನಾಥ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನಾರಾಯಣ ಗುರುಗಳ ಚಿಂತನೆಯನ್ನು ತಿಳಿಸುವ ಮಹತ್ಕಾರ್ಯವಾಗುತ್ತಿರುವುದು ಶ್ಲಾಘನೀಯ. ಈಗಾಗಲೇ ನಾರಾಯಣಗುರು ನಿಗಮ ಸ್ಥಾಪನೆಯಾಗಿದೆ. ಮುಂದಿನ ವರ್ಷಗಳಲ್ಲಿ ರಾಜ್ಯಮಟ್ಟದಲ್ಲಿ ನಾರಾಯಣ ಗುರುಗಳ ಜಯಂತಿಯನ್ನು ಜಿಲ್ಲೆಯಲ್ಲಿ ನಡೆಯುವಂತೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಉಪನ್ಯಾಸ ನೀಡಿದಚಿಂತಕ ಹಾಗೂ ಲೇಖಕರಾದ ಅರವಿಂದ್ ಚೊಕ್ಕಾಡಿ,ಅದ್ವೈತ ಸಿದ್ಧಾಂತವನ್ನು ತಮ್ಮ ಚಿಂತನೆಗಳಲ್ಲಿ ಅಳವಡಿಸಿಕೊಂಡಿದ್ದ ನಾರಾಯಣ ಗುರುಗಳು ಅಸ್ರಶ್ಯತೆಯ ವಿರುದ್ಧ ಹೋರಾಡಿದರು.ಮದ್ಯಪಾನ ನಿಷೇಧ, ಬಲಿಪದ್ಧತಿ ನಿಷೇಧದಂತಹ ಕಾರ್ಯಗಳನ್ನು ರೂಪಿಸಿದರು. ಧರ್ಮದ ಜೊತೆಗೆ ಶಿಕ್ಷಣದಿಂದ ಉತ್ತಮ ಜ್ಞಾನ ಮತ್ತು ಸಂಸ್ಕಾರವು ಬೆಳೆಯುತ್ತದೆ. ಶಿಕ್ಷಣದಿಂದ ಸಮಾಜದ ಅಭಿವೃದ್ಧಿ ಆಗುತ್ತದೆ ಎನ್ನುವ ಉತ್ತಮ ಚಿಂತನೆ ನಾರಾಯಣ ಗುರುಗಳದ್ದಾಗಿತ್ತು. ನಾರಾಯಣ ಗುರುಗಳ ಸಂಪೂರ್ಣ ಬದುಕನ್ನು ನಾವು ಅರ್ಥ ಮಾಡಿಕೊಂಡಲ್ಲಿ ಅವರ ಚಿಂತನೆಗಳನ್ನು ಅಳವಡಿಸಿಕೊಂಡಲ್ಲಿ ಯಶಸ್ವಿ ಜೀವನ ನಮ್ಮದಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿಕಣ್ಣೂರು, ಗೇರುಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಕುದ್ರೋಳಿ ಗೋಕರ್ಣನಾಥಕ್ಷೇತ್ರ ಅಧ್ಯಕ್ಷ ಸಾಯಿರಾಮ್, ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಸಂಚಾಲಕ ವಸಂತ್ ಕಾರಂದೂರು, ಪ್ರಾಂಶುಪಾಲಡಾ. ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ರಾಜೇಶ್ ಜಿ ಸ್ವಾಗತಿಸಿದರು