ಮಂಗಳೂರು: ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ "ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರೊಜೆಕ್ಟ್ ಮಾದರಿಗಳ ಪ್ರಾತ್ಯಕ್ಷಿಕೆ " ಕಾರ್ಯಕ್ರಮವು ಇಂದು ಬೆಳಿಗ್ಗೆ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಪ್ರಸಿದ್ಧ ಕೈಗಾರಿಕೋದ್ಯಮಿ, ಅಜಿತ್ ಎಂಟರ್ಪ್ರೈಸಸ್ ಸಂಸ್ಥೆಯ ಮಾಲಕರು, ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್  ಮಂಗಳೂರು ಜಿಲ್ಲಾ ವಿಭಾಗದ ಅಧ್ಯಕ್ಷರಾದ  ಅಜಿತ್ ಕಾಮತ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್, ನ್ಯಾನೋ ಟೆಕ್ನಾಲಜಿ, ಮೆಕ್ಯಾನಿಕಲ್ ಇಂಜಿನಿಯರಿಂಗ್, ಸೈಬರ್ ಸೆಕ್ಯೂರಿಟಿ ಆಂಡ್ ಸೈಬರ್ ಫೊರೆನ್ಸಿಕ್ಸ್, ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮಷೀನ್ ಲರ್ನಿಂಗ್, ಐಓಟಿ, ರೊಬೋಟಿಕ್ಸ್, ಎಐವಿಆರ್ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ 65 ನವೀನ ರೀತಿಯ ಪ್ರೊಜೆಕ್ಟ್ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಾಧಿಪತಿಗಳಾದ ಡಾ. ಸಿಎ ಎ. ರಾಘವೇಂದ್ರ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ, ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದ ಡಾ. ಥಾಮಸ್ ಪಿಂಟೋ, ಕಾಲೇಜಿನ ಪ್ರೊಜೆಕ್ಟ್ ಸಮನ್ವಯಕಾರರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿಗಳಾದ ಅಜಿತ್ ಕಾಮತ್ ರವರು ಮಾತನಾಡಿ, ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರೊಜೆಕ್ಟ್ ಮಾದರಿಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಪ್ರಾಜೆಕ್ಟ್ ಪ್ರಾತ್ಯಕ್ಷಿತೆಯು, ನಾಲ್ಕು ವರ್ಷಗಳ ಇಂಜಿನಿಯರಿಂಗ್ ಅಧ್ಯಯನದ ಕಲಿಕೆಯ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ, ಆದ್ದರಿಂದ ಭವಿಷ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೋದ್ಯಮ ಸಂಘ ಸಂಸ್ಥೆಗಳೊಂದಿಗೆ ಸಂವಹನವನ್ನು ಪ್ರಾರಂಭಿಸುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳನ್ನು ವಾಣಿಜ್ಯೋದ್ಯಮಿಗಳಾಗಿ ರೂಪುಗೊಳಿಸಲು ಸಾಧ್ಯ ಎಂದು ಹೇಳಿದರು. ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಹೊಂದಲು, ಯುವಜನತೆಯು ಹೊಸ ವಿಷಯಗಳನ್ನು ಕಲಿಯಬೇಕು, ಆ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಬೇಕು. ಉತ್ತಮ ಸಂವಹನ, ಉತ್ತಮ ಪ್ರಸ್ತುತಿ, ವೃತ್ತಿಪರತೆ ಮತ್ತು ಬಧ್ಧತೆ ಜೀವನದಲ್ಲಿ ಮುಖ್ಯ. ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಮಾಜದ ಜನರೊಂದಿಗೆ ಉತ್ತಮ ಸಂಪರ್ಕವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪ್ರತಿಯೊಬ್ಬ ಯಶಸ್ವಿ ಉದ್ಯಮಿಯ ಹಿಂದೆ ವೈಫಲ್ಯಗಳಿವೆ, ಉದ್ಯಮಿಯಾಗಲು ಉತ್ಸಾಹ ಬಹಳ ಮುಖ್ಯ, ಯಾವ ಕ್ಷೇತ್ರದಲ್ಲಿ ಸಮಸ್ಯೆಗಳಿವೆಯೋ ಅದನ್ನು ಅರಿತು ಅದಕ್ಕೆ ಸೂಕ್ತವಾದ ಪರಿಹಾರವನ್ನು ಹುಡುಕಿ, ಯಶಸ್ವಿ ಉತ್ಪನ್ನಗಳನ್ನು ಆವಿಷ್ಕರಿಸಿದ್ದಲ್ಲಿ ಮಾತ್ರ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ಹೇಳಿದರು ಹಾಗೂ ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿದರು.

ಉಪಕುಲಪತಿಗಳಾದ ಡಾ. ಕೆ. ಸತ್ಯನಾರಾಯಣ ರೆಡ್ಡಿ ಯವರು ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸ, ಧನಾತ್ಮಕ ವರ್ತನೆ ಮತ್ತು ಆಲೋಚನೆಗಳನ್ನು ರೂಢಿಸಿಕೊಳ್ಳುವುದರ ಮೂಲಕ ವೃತ್ತಿಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಹೇಳಿದರು. ಮನುಷ್ಯನು ಜನ್ಮತಃ ಇಂಜಿನಿಯರ್ ಆಗಿ ಹುಟ್ಟಿರುತ್ತಾನೆ, ಆದ್ದರಿಂದ ಹೆಚ್ಚಿನ ಪ್ರಯತ್ನ, ಪರಿಶ್ರಮ, ಸಂಪನ್ಮೂಲಗಳನ್ನು ಹಾಗೂ ಕಲ್ಪನೆಗಳನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳುವುದರ ಮೂಲಕ ಜೀವನದಲ್ಲಿ ಯಶಸ್ಸನ್ನು ಹೊಂದಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಾಧಿಪತಿಗಳಾದ ಡಾ. ಸಿಎ ಎ. ರಾಘವೇಂದ್ರ ರಾವ್ ರವರು ಮಾತನಾಡಿ, ನಾಲ್ಕು ವರ್ಷಗಳ ಜ್ಞಾನವು ಅದ್ಭುತವಾದ ಪ್ರಾಜೆಕ್ಟ್ ಮಾದರಿಗಳ ರೂಪದಲ್ಲಿ ಪ್ರತಿಫಲಿಸಿದೆ ಎಂದು ಹೇಳಿದರು. ಇಂಜಿನಿಯರಿಂಗ್ ಪದವಿಯ ಅಂತಿಮ ವರ್ಷದ ಪ್ರೊಜೆಕ್ಟ್ ಯೋಜನೆಗಳು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಉತ್ಕೃಷ್ಟಗೊಳಿಸಲು ಉತ್ತಮ ಅವಕಾಶವನ್ನು ನೀಡುತ್ತವೆ. ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಬಹಳ ಮುಖ್ಯ. ಶ್ರೀನಿವಾಸ ವಿಶ್ವವಿದ್ಯಾಲಯವು ಸಂಶೋಧನಾ ಆಧಾರಿತ ಕಲಿಕೆಗೆ ಹೆಚ್ಚಿನ ಆಧ್ಯತೆ ಮತ್ತು ಸಹಕಾರವನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯ ಪೇಟೆಂಟ್‌ಗಳನ್ನು ಪಡೆಯುವಂತಾಗಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನಾದರೂ ಹೊಸ ಆವಿಷ್ಕಾರವನ್ನು ಮಾಡಲು ತಮ್ಮ ದೃಷ್ಟಿಕೋನ ಮತ್ತು ಮಾನಸಿಕತೆಯನ್ನು ಧನಾತ್ಮಕವಾಗಿ ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಉತ್ತಮ ಗುರಿಯನ್ನು ಹೊಂದಿ, ಭವಿಷ್ಯವನ್ನು ಸವಾಲಾಗಿ ತೆಗೆದುಕೊಂಡು, ಸಕಾರಾತ್ಮಕ ಮನೋಭಾವವನ್ನು ಹೊಂದಿಕೊಂಡು, ಒಳ್ಳೆಯ ಪ್ರಯತ್ನವನ್ನು ಮಾಡಿದರೆ ಯಾವಾಗಲೂ ಉತ್ತಮ ಫಲಿತಾಂಶವು ಸಿಗುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು, ತಾವು ಕಲಿತ ಇಂಜಿನಿಯರಿಂಗ್ ವಿಷಯದ ಜೊತೆಗೆ, ಇತರ ಶೈಕ್ಷಣಿಕ ವಿಷಯಗಳ ಕುರಿತು ಸಹ ಜ್ಞಾನವನ್ನು ವೃದ್ಧಿಗೊಳಿಸಿ, ನಾವೀನ್ಯತೆ, ಕಠಿಣ ಪರಿಶ್ರಮ, ಸಕಾರಾತ್ಮಕ ಚಿಂತನೆ ಮತ್ತು ಪರೋಪಕಾರ ಮನೋಭಾವದ ಮೂಲಕ ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮ ಕೊಡುಗೆಯನ್ನು ನೀಡಿ, ಯಶಸ್ವಿ ವಾಣಿಜ್ಯೋದ್ಯಮಿಯಾಗಿ ಬೆಳೆಯುವಂತಾಗಬೇಕು ಎಂದು ಆಶಿಸಿದರು, ಹಾಗೂ ಅವರ ಉಜ್ವಲ ಭವಿಷ್ಯಕ್ಕೆ ಶುಭವನ್ನು ಕೋರಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಮುಖ್ಯ ಅತಿಥಿ  ಅಜಿತ್ ಕಾಮತ್ ರವರ ಜೊತೆಗೆ, ಉದ್ಯಮಶೀಲತೆ ಮತ್ತು ಬಂಡವಾಳ ಹೂಡಿಕೆಯ ಕುರಿತು ಸಂವಾದವನ್ನು ನಡೆಸಿದರು.

ಸಭಾ ಕಾರ್ಯಕ್ರಮದ ಬಳಿಕ, ಕುಲಾಧಿಪತಿಗಳಾದ ಡಾ. ಸಿಎ ಎ. ರಾಘವೇಂದ್ರ ರಾವ್ ಹಾಗೂ ಮುಖ್ಯ ಅತಿಥಿ  ಅಜಿತ್ ಕಾಮತ್ ರವರು ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನವೀನ ಆಲೋಚನೆಗಳೊಂದಿಗೆ ಸಿದ್ಧಪಡಿಸಿದ ಉತ್ತಮ ಗುಣಮಟ್ಟದ ಪ್ರಾಜೆಕ್ಟ್ ಮಾದರಿಗಳನ್ನು ಪರಿಶೀಲಿಸಿದರು ಹಾಗೂ ಉಪನ್ಯಾಸಕರನ್ನು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಕಾಲೇಜಿನ ಮುಖ್ಯಸ್ಥರಾದ ಡಾ. ಥಾಮಸ್ ಪಿಂಟೋ ರವರು ಸ್ವಾಗತ ಭಾಷಣ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.

ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ಮುಖ್ಯ ಅತಿಥಿ  ಅಜಿತ್ ಕಾಮತ್ ರವರನ್ನು ಸಭೆಗೆ ಪರಿಚಯಿಸಿದರು, ಹಾಗೂ ಅಂತಿಮ ವರ್ಷದ ಪ್ರೊಜೆಕ್ಟ್ ಮಾದರಿಗಳ ಕಿರುಚಿತ್ರಣವನ್ನು ನೀಡಿದರು.

ವಿಶ್ವವಿದ್ಯಾಲಯದ ತರಬೇತಿ ಮತ್ತು ನಿಯೋಜನೆ (ಉದ್ಯೋಗ) ಅಧಿಕಾರಿ, ಪ್ರೊ. ಶ್ವೇತಾ ಪೈ ಯವರು ವಂದನಾರ್ಪಣೆ ಸಲ್ಲಿಸಿದರು. ಇಂಜಿನಿಯರಿಂಗ್ ವಿದ್ಯಾರ್ಥಿನಿ  ದಿಶಾ ಅಮೀನ್ ಪ್ರಾರ್ಥನೆಯನ್ನು ಸಲ್ಲಿಸಿದರು.

ಪ್ರೊ. ರೋಹನ್ ಫೆರ್ನಾಂಡಿಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.