ಮಂಗಳೂರು: ಕ್ರಿಕೆಟ್‌ ಎಂದರೆ ಹಬ್ಬವಿದ್ದಂತೆ. ಶ್ರಮಪಟ್ಟರೆ ಗ್ರಾಮೀಣ ಪ್ರತಿಭೆಗಳು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಆ ಮೂಲಕ ಕಾಲೇಜಿನಲ್ಲಿ ಸಿಗುವ ಸಣ್ಣ-ಪುಟ್ಟ ಅವಕಾಶಗಳೆಲ್ಲವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವಂತೆ ವಿಶ್ವವಿದ್ಯಾನಿಲಯ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ದಯಾಕರ್‌ ಬಿ. ಅವರು ಕರೆ ನೀಡಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕ್ರೀಡಾ ವಿಭಾಗ ಮತ್ತು ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ನಡೆದ ಯೂನಿವರ್ಸಿಟಿ ಪ್ರೀಮಿಯರ್ ಲೀಗ್‌_ಸೀಸನ್‌ 6ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಯಾವುದೇ ಆಟವನ್ನು ಕೇವಲ ಆಟವಾಡುತ್ತಿರುವ ಆಟಗಾರರು ಮಾತ್ರವಲ್ಲದೇ ನೆರೆದಿರುವ ಪ್ರೇಕ್ಷಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬೇಕು. ಕ್ರಿಕೆಟ್‌ ಎಂಬುದು ಹಬ್ಬವಿದ್ದಂತೆ. ಹಾಗಾಗಿ ಇದನ್ನು ಎಲ್ಲಾ  ಕಡೆಗಳಲ್ಲೂ ಹಬ್ಬದ ರೀತಿಯಲ್ಲಿ ಸಂಭ್ರಮಾಚರಣೆ ಮಾಡಲಾಗುತ್ತದೆ ಎಂದರು.

ಯೂನಿವರ್ಸಿಟಿ ಪ್ರೀಮಿಯರ್ ಲೀಗ್‌_ಸೀಸನ್‌ 6ರಲ್ಲಿ ಯುಸಿಎಂ ರಾಯಲ್ಸ್‌, ಯುಸಿಎಂ ಸ್ಟ್ರೈಕರ್ಸ್‌, ಯುಸಿಎಂ ಬ್ರಿಗೇಡ್ಸ್‌, ಯುಸಿಎಂ ಇಲವೆನ್‌, ಯುಸಿಎಂ ಜಾಗ್ವಾರ್‌, ಯುಸಿಎಂ ವಾರಿಯರ್ಸ್‌ ಹಾಗೂ ಮಹಿಳೆಯರ ಯುಸಿಎಂ ಟೈಟಾನ್ಸ್‌ ಮತ್ತು ಯುಸಿಎಂ ರೇಂಜರ್ಸ್‌ ಸೇರಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಯುಸಿಎಂ ಜಾಗ್ವಾರ್‌ ತಂಡ ಗೆಲುವಿನ ನಗೆ ಬೀರಿದರೆ, ಯುಸಿಎಂ ರಾಯಲ್ಸ್‌ ತಂಡ ರನ್ನರ್‌ ಆಗಿ ಹೊರಹೊಮ್ಮಿದರು. ಅದೇ ರೀತಿ ಮಹಿಳೆಯರ ತಂಡದಲ್ಲಿ ಯುಸಿಎಂ ರೇಂಜರ್ಸ್‌ ತಂಡ ಗೆಲವು ಸಾಧಿಸಿತು.

ಯುಸಿಎಂ ಜಾಗ್ವಾರ್‌ ತಂಡದ ಅನಿಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತೃತೀಯ ಬಿಎ ವಿದ್ಯಾರ್ಥಿ ಸುದೀಪ್‌ ತನ್ನದಾಗಿಸಿಕೊಂಡರು. ಅಮೂಲ್ಯವಾದ ಆಟಗಾರ ಪ್ರಶಸ್ತಿಯನ್ನು ನವ್ಯ ಸಿ. ಅಲಿ, ಉತ್ತಮ ಬೌಲರ್‌ ಪ್ರಶಸ್ತಿಯನ್ನು ಮರ್ಷದ್‌, ಉತ್ತಮ ಬ್ಯಾಟ್ಸ್‌ಮನ್‌ ಪ್ರಶಸ್ತಿಯನ್ನು ಅಖಿಲ್‌, ಉತ್ತಮ ಕ್ಷೇತ್ರ ನಿರ್ವಹಣೆ ಪ್ರಶಸ್ತಿಯನ್ನು ಅಜಯ್‌ ಪಡೆದುಕೊಂಡರು.