ಮಂಗಳೂರು, ಸೆ. 23: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಮ್.ಎಸ್.ಎಮ್.ಇ ನಿರ್ದೇಶನಾಲಯ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್ (KCTU) ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (TECSOK), ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು ಹಾಗೂ ಜಿಲ್ಲಾ ಸಣ್ಣ ಉದ್ಯಮಗಳ ಅಸೋಸಿಯೇಶನ್ (DSIA) ಸಂಯುಕ್ತ ಆಶ್ರಯದಲ್ಲಿ  ರ್ಯಾಂಪ್ (RAMP) (Raising and Accelerating MSME performance) ಯೋಜನೆಯಡಿಯಲ್ಲಿ ಒಂದು ದಿನದ  ಟ್ರೆಡ್ಸ್ (Trade Receivables Discounting Systems (TReDS) ಹಾಗೂ  ಇ.ಎಸ್.ಎಂ (Environment and Social Management support for MSMEs (ESM) ಅರಿವು ಕಾರ್ಯಕ್ರಮವನ್ನು ಜಿಲ್ಲಾ ಸಣ್ಣ ಉದ್ಯಮಗಳ ಅಸೋಸಿಯೇಶನ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು.  

ಕಾರ್ಯಕ್ರಮದಲ್ಲಿ 10 ರಿಂದ 1.30 ರ ವರಗೆ ಟ್ರೆಡ್ಸ್‍ಗೆ ಸಂಬಂಧಪಟ್ಟ ಮಾಹಿತಿಯನ್ನು ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 5 ರವರೆಗೆ ಇ.ಎಸ್.ಎಂಗೆ ಸಂಬಂಧಪಟ್ಟ ಮಾಹಿತಿಯನ್ನು ಜಿಲ್ಲೆಯ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಉದ್ಯಮಶೀಲರಿಗೆ ನೀಡಲಾಯಿತು. 

ಕಾರ್ಯಕ್ರಮ ಉದ್ಘಾಟಿಸಿದ ಕೆನರಾ ಬ್ಯಾಂಕ್‍ಉಪ ಪ್ರಧಾನ ವ್ಯವಸ್ಥಾಪಕ ಶೈಲೇಂದ್ರನಾಥ ಮಾತನಾಡಿ, ಕೆನರಾ ಬ್ಯಾಂಕ್‍ನಿಂದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಶೀಲರಿಗೆ ಸಿಗುತ್ತಿರುವ ಹಣಕಾಸು ಸೌಲಭ್ಯಗಳ ಬಗ್ಗೆ ತಿಳಿಸಿ, ಈ ಸೌಲಭ್ಯಗಳನ್ನು ಉದ್ಯಮಶೀಲರು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. 

ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಸಿದ್ದರಾಜು ಮಾತನಾಡಿ,  ಭಾರತ ಸರ್ಕಾರದ ರ್ಯಾಂಪ್ ಯೋಜನೆಯ ಉದ್ದೇಶ ಹಾಗೂ ಮುಖ್ಯಾಂಶಗಳನ್ನು ತಿಳಿಸಿದರು. 

ಕೆನರಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಅರುಣ ಪಡಿಯಾರ, ಮಾತನಾಡಿ, ಯೋಜನೆ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಶೀಲರಿಗೆ ದುಡಿಮೆ ಬಂಡವಾಳ ನಿರ್ವಹಣೆಗೆ ತುಂಬಾ ಉಪಯುಕ್ತವಾಗಿದ್ದು, ಉದ್ಯಮಶೀಲರು ಈ ಯೋಜನೆ ಲಾಭ ಪಡೆಯಬೇಕೆಂದು ತಿಳಿಸಿದರು. 

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್‍ ಮಾತನಾಡಿ, ಈ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಪಾತ್ರ ಹಾಗೂ ಈ ಸೌಲಭ್ಯಗಳನ್ನು ಹೇಗೆ ಉದ್ಯಮಶೀಲರು ಪಡೆದು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು. ಈ ನಿಟ್ಟಿನಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಅವಶ್ಯಕ ಮಾರ್ಗದರ್ಶನ ನೀಡಲು ಸಿದ್ಧವಿದೆ ಎಂದು ತಿಳಿಸಿದರು. 

ತಾಂತ್ರಿಕ ಅಧಿವೇಶನದಲ್ಲಿ ಬ್ಯಾಂಕ್ ನಿವೃತ್ತ ಅಧಿಕಾರಿ  ಆರ್. ಕೆ. ಬಾಲಚಂದ್ರ ಅವರು ಟ್ರೆಡ್ಸ್ ಸೌಲಭ್ಯದ ಉದ್ದೇಶ, ನೊಂದಣಿ, ಕೆ.ವೈ.ಸಿ, ಖರೀದಿದಾರ ಹಾಗೂ ಬ್ಯಾಂಕ್‍ಗಳ ಪಾತ್ರ, ಮಾರಾಟಗಾರ ಹಾಗೂ ಬ್ಯಾಂಕ್‍ಗಳ ಪಾತ್ರ, ಅನ್ವಯಿಸುವ ಷರತ್ತುಗಳು ಮುಂತಾದ ವಿಷಯದ ಬಗ್ಗೆ ಉದ್ಯಮಶೀಲರಿಗೆ ಮಾಹಿತಿ ನೀಡಿದರು. 

ಮಧ್ಯಾಹ್ನದ ತಾಂತ್ರಿಕ ಅಧಿವೇಶನದಲ್ಲಿ ನಿವೃತ್ತ ಮಿಲಿಟರಿ ಇಂಜೀನಿಯರಿಂಗ್ ಅಧಿಕಾರಿ ಭಾನುಪ್ರತಾಪ ಸಿಂಗ್ ಇ.ಎಸ್.ಎಂ ಬಗ್ಗೆ ಉದ್ಯಮಶೀಲರಿಗೆ ಮಾಹಿತಿ ನೀಡಿದರು. 

ಡಾ. ಜಯಾ ಶೆಟ್ಟಿ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಶೀಲರು ಡಿಜಿಟ್‍ಲೈಜೇಶನ್ ಬಗ್ಗೆ ಮಾಹಿತಿ, ಅದರ  ಪ್ರಾಮುಖ್ಯತೆ, ಪ್ರಯೋಜನಗಳು ಹಾಗೂ ಅದನ್ನು ತಮ್ಮ ಉದ್ಯಮಗಳಲ್ಲಿ ಹೇಗೆ ಉಪಯೋಗಿಸಿಕೊಳ್ಳಬಹುದೆಂಬ ವಿವರಗಳನ್ನು ನೀಡಿದರು.  

ಕಾರ್ಯಕ್ರಮದಲ್ಲಿ ಸಿಡಾಕ್ ನಿವೃತ್ತ ಜಂಟಿ ನಿರ್ದೇಶಕ ಅರವಿಂದ ಡಿ. ಬಾಳೇರಿ, ಸ್ವಾಗತಿಸಿದರು. ಪ್ಲಾಸ್ಟಿಕ್ ಉದ್ಯಮಿಗಳ ಸಂಘದ ಅಧ್ಯಕ್ಷ  ನಜೀರ್, ಕೆನರಾ ಬ್ಯಾಂಕ್‍ ಹಿರಿಯ ವ್ಯವಸ್ಥಾಪಕ ಧನಂಜಯ ಪಾಟೀಲ,ಮಹಿಳಾ ವಿಭಾಗದ ಹಿಂದಿನ ಡಿ.ಎಸ್.ಐ.ಎ ಅಧ್ಯಕ್ಷೆ ಹರೀನಾ ರಾವ್ ಉಪಸ್ಥಿತರಿದ್ದರು.  

ಸಿಡಾಕ್‍ ಉಪ ನಿರ್ದೇಶಕ ಎಸ್.ವಿ. ಎಲಿಗಾರ ನಿರೂಪಿಸಿ ವಂದಿಸಿದರು.