ಮಂಗಳೂರು, ಅ.28: ಬಾಲ ಭವನ ಸೊಸೈಟಿ, ದಕ್ಷಿಣ ಕನ್ನಡ ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ 9 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನವೆಂಬರ್ 4 ರಂದು ಬೆಳಿಗ್ಗೆ 10ಗಂಟೆಗೆ ನಗರದ ಕದ್ರಿ ಜಿಲ್ಲಾ ಬಾಲಭವನದಲ್ಲಿ ಏರ್ಪಡಿಸಲಾಗಿದೆ.
1) ಸೃಜನಾತ್ಮಕ ಕಲೆಗಳಾದ ಚಿತ್ರಕಲೆ, ಕರಕುಶಲ ಕಲೆ, ಜೇಡಿಮಣ್ಣಿನ ಕಲೆ (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು) 2) ಸೃಜನಾತ್ಮಕ ಬರವಣಿಗೆ ಕಲೆಗಳಾದ ಕಥೆ, ಕವನ, ಪ್ರಬಂಧ ರಚನೆ (ಮೂರರಲ್ಲೂ ಕಡ್ಡಾಯವಾಗಿ ಭಾಗವಹಿಸಬೇಕು), 3) ಸೃಜನಾತ್ಮಕ ಪ್ರದರ್ಶನ ಕಲೆಗಳಾದ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಾಭಿನಯ, ಯೋಗ ನೃತ್ಯ, ಮ್ಯಾಜಿಕ್ (ಯಾವುದಾದರೊಂದು ಕಲೆಯನ್ನು ಮಾತ್ರ ಪ್ರದರ್ಶಿಸಲು ಅವಕಾಶವಿರುತ್ತದೆ ಹಾಗೂ ಗುಂಪು ಪ್ರದರ್ಶನಕ್ಕೆ ಅವಕಾಶವಿರುವುದಿಲ್ಲ) ಹಾಗೂ 4) ವಿಜ್ಞಾನದಲ್ಲಿ ನೂತನ ಆವಿಷ್ಕಾರ.
ಹೀಗೆ 4 ವಿಭಾಗಗಳಲ್ಲಿ ಸ್ಪರ್ಧೆಗಳಲ್ಲಿ ಸ್ಫರ್ಧಿಸಲು ನವೆಂಬರ್ 3 ರಂದು ಮಧ್ಯಾಹ್ನದೊಳಗಾಗಿ ಹೆಸರನ್ನು ನೋಂದಾಯಿಸಬೇಕು. ಅಲ್ಲದೇ ಒಂದು ಮಗು ಒಂದು ಸ್ಪರ್ಧೆಯಲ್ಲಿ ವೈಯಕ್ತಿಕವಾಗಿ ಭಾಗವಹಿಸಲು ಮಾತ್ರ ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗೆ ಬಿಜೈ ಜಿಲ್ಲಾ ಸ್ತ್ರೀ ಶಕ್ತಿ ಭವನದ 2 ನೇ ಮಹಡಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ (ದೂ.ಸಂ: 0824-2451254) ಸಂಪರ್ಕಿಸಬಹುದು ಎಂದು ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.