ಮಂಗಳೂರು:  ಕಾರ್ವಾಲ್ ಕುಟುಂಬ ಮತ್ತು ಮಾಂಡ್ ಸೊಭಾಣ್ ಜಂಟಿಯಾಗಿ ಕೊಡಮಾಡುವ ಕಲಾಕಾರ್ ಪುರಸ್ಕಾರ ಹಸ್ತಾಂತರ ಸಂಭ್ರಮವು ನವೆಂಬರ್ 03 ರಂದು ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು. ಕಾರ್ವಾಲ್ ಕುಟುಂಬದ ಪ್ರತಿನಿಧಿ ಭಾಷಾ ತಜ್ಞ ವಂ. ಡಾ. ಪ್ರತಾಪ್ ನಾಯ್ಕ್ ಪ್ರಸ್ತಾವಿಕ ನುಡಿಗಳಾನ್ನಾಡಿದರು.

ನಂತರ 20 ನೇ ಕಲಾಕಾರ್ ಪುರಸ್ಕಾರಕ್ಕೆ ಆಯ್ಕೆಗೊಂಡ ಸಂಗೀತಗಾರ ರೋಶನ್ ಕ್ರಾಸ್ತಾ ಇವರನ್ನು ಮುಂಬಯಿಯ ಯಶಸ್ವಿ ಬ್ಯಾಂಕರ್ ಹಾಗೂ ಕೊಂಕಣಿ ಮುಂದಾಳು, ಕಾರ್ಯಕ್ರಮದ ಮುಖ್ಯ ಅತಿಥಿ ಜೊನ್ ಡಿಸಿಲ್ವಾ ಶಾಲು, ಫಲಪುಷ್ಪ, ಕೊಂಕಣಿ ಪೇಟ ಉರ್ಮಾಲ್, ಸನ್ಮಾನ ಪತ್ರ, ಸ್ಮರಣಿಕೆ ಹಾಗೂ ರೂ. ಐವತ್ತು ಸಾವಿರದ ಚೆಕ್ ನೀಡಿ ಗೌರವಿಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಹಾಗೂ ಕಾರ್ಯದರ್ಶಿ ಕೇರನ್ ಮಾಡ್ತಾ ಸನ್ಮಾನದಲ್ಲಿ ಸಹಕರಿಸಿದರು.  ಕಾರ್ವಾಲ್ ಕುಟುಂಬದಿಂದ ಫ್ಲೊರಿನ್ ಲೋಬೊ, ಫೆಲಿಕ್ಸ್ ಲೋಬೊ ಮತ್ತು ರೆನಿಟಾ ಲೋಬೊ ಹಾಗೂ ರೋಶನ್ ಪತ್ನಿ  ರೇಷ್ಮಾ, ಮಗ ಯೊಹಾನ್, ತಂದೆ ತಾಯಿ ಸ್ಟ್ಯಾನಿ-ರೋಜಿ ಕ್ರಾಸ್ತಾ ಹಾಗೂ ಅತ್ತೆ ಲೀನಾ ಸಿಕ್ವೇರಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತನ್ನ ಭಾಷಣದಲ್ಲಿ ಜೊನ್ ಡಿಸಿಲ್ವಾ ಕೊಂಕಣಿಯ ಕೆಲಸಗಳ ನಿರಂತರತೆ ಬಗ್ಗೆ ಮಾಂಡ್ ಸೊಭಾಣ್ ಸಂಸ್ಥೆಗೆ ಮೆಚ್ಚುಗೆ ಸೂಚಿಸಿ, ರೋಶನ್ ರನ್ನು ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ತನ್ನ ಭಾವನೆಗಳನ್ನು ಹಂಚಿಕೊಂಡ ರೋಶನ್ ಸಂಗೀತಗಾರರ ಕಷ್ಟಗಳ ಬಗ್ಗೆ ತನ್ನ ಮಾತುಗಳನ್ನು ಹಂಚಿಕೊಂಡು, ತನ್ನ ಸಂಗೀತ ಪಯಣದಲ್ಲಿ ಸಹಕರಿಸಿದವರನ್ನು ನೆನಪಿಸಿದರು.

ನಂತರ ರೂಪಾಯಿ ಒಂದು ಲಕ್ಷ ಮೊತ್ತದ ಎರಿಕ್ ಒಝೇರಿಯೊ ಅಮೃತೋತ್ಸವ ಸಂಶೋಧನಾ ಅನುದಾನಕ್ಕೆ ಆಯ್ಕೆಗೊಂಡ ಮಾಧ್ಯಮ ಮತ್ತು ಸಂವಹನ ಸ್ನಾತಕೋತ್ತರ ಪದವೀಧರೆ ಪ್ರಿಥುಮ ಮೊಂತೇರೊ, ವಾಮಂಜೂರು ಇವರ ಹೆಸರನ್ನು ಅರುಣ್ ರಾಜ್ ರೊಡ್ರಿಗಸ್ ಘೋಷಿಸಿದರು. `ಕೊಂಕಣಿ ಕ್ರೈಸ್ತರ ಜನಪದ: ನಡೆದು ಬಂದ ದಾರಿ’ ಈ ವಿಷಯದ ಬಗ್ಗೆ ಅವರು ಸಂಶೋಧನೆ ನಡೆಸುವರು.