ಉಡುಪಿ: ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೇಚೆಗೆ ಕಾರ್ಕಳ ಪ್ರಥಮ ದರ್ಜೆ ಕಾಲೇಜಿನ ಮಂಜುನಾಥ ಪೈ ಸ್ಮಾರಕದಲ್ಲಿ ನಡೆದ “ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನ” ಕುರಿತ ಮಾಹಿತಿ ಕಾರ್ಯಕ್ರಮವನ್ನು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ. ಸಂದೀಪ್ ಕುಡ್ವ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಯೋಡಿನ್ ನಮ್ಮ ದೇಹಕ್ಕೆ ಬೇಕಾದ ಒಂದು ಸೂಕ್ಷ್ಮ ಪೋಷಕಾಂಶ, ಕತ್ತಿನ ಮುಂಭಾಗದಲ್ಲಿರುವ ಥೈರಾಯ್ಡ್ ಗ್ರಂಥಿಯಿಂದ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಗೆ ಅಯೋಡಿನ್ ಅಂಶ ಬಹಳ ಮುಖ್ಯ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ. ಶಮಾ ಶುಕುರ್, ಆಹಾರದಲ್ಲಿ ಅಯೋಡಿನ್ ಅಂಶ ಕಡಿಮೆ ಆದಲ್ಲಿ ಮಕ್ಕಳಲ್ಲಿ ಬುದ್ದಿಮಟ್ಟ ಕಡಿಮೆ, ಕಲಿಕೆಯಲ್ಲಿ ಹಿಂದುಳಿಕೆ ಹಾಗೂ ಮಾನಸಿಕ ವಿಕಲತೆ, ಕಿವುಡುತನ, ಕುಬ್ಜತನ, ಬೇಗ ಸುಸ್ತಾಗುವುದು ಮತ್ತು ಗಳಗಂಡರೋಗ ಉಂಟು ಮಾಡುತ್ತದೆ. ಗರ್ಭಿಣಿಯರಲ್ಲಿ ಅಯೋಡಿನ್ ಮಟ್ಟ ಕಡಿಮೆ ಆದರೆ ಗರ್ಭಪಾತ, ಸಂತಾನೋತ್ಪತ್ತಿಯಲ್ಲಿ ತೊಂದರೆ, ಶಿಶುವಿನ ಮೆದುಳಿನ ಮೇಲೆ ಸರಿಪಡಿಸಲಾಗದಂತಹ ತೊಂದರೆ ಉಂಟಾಗಬಹುದು ಈ ಕುರಿತು ಜಾಗೃತಿ ಅಗತ್ಯ ಎಂದರು.,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರ ಪ್ರಾಂಶುಪಾಲೆ ಡಾ. ಚಂದ್ರಾವತಿ, ಮಕ್ಕಳಿಗೆ ಅಯೋಡಿನ್ ಮುಂತಾದ ಸೂಕ್ಷ್ಮ ಪೋಷಕಾಂಶಗಳು ಅಗತ್ಯವಾಗಿ ಬೇಕಾಗಿದ್ದು, ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಅಯೋಡಿನ್ ಮಾಹಿತಿಯ ಕರಪತ್ರಗಳನ್ನು ವೇದಿಕೆಯಲ್ಲಿರುವ ಗಣ್ಯರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಸಂತ್ ಶೆಟ್ಟಿ ಎಮ್, ಎನ್.ಎಸ್.ಎಸ್ ಅಧಿಕಾರಿ ಸೌಮ್ಯ, ಕಾಲೇಜಿನ ಭೋಧಕ ಮತ್ತು ಭೋದಕೇತರ ವೃಂದ, ತಾಲೂಕು ಆರೋಗ್ಯ ಕಛೇರಿಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಎನ್.ಎಸ್ ಎಸ್ ಅಧಿಕಾರಿ ಪ್ರಸನ್ನ ಸ್ವಾಗತಿಸಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ನಿರೂಪಿಸಿದರೆ, ಎನ್.ಎಸ್.ಎಸ್ ವಿದ್ಯಾರ್ಥಿ ಸೂರಜ್ ವಂದಿಸಿದರು.