ಮಂಗಳೂರು: ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆ ಹಾಗೂ ನಾಗರಿಕರಿಗೆ ಆಹಾರ ಭದ್ರತೆಗಾಗಿ ಅಹರ್ನಿಶಿ ದುಡಿದ ಮಹಾನ್ ವ್ಯಕ್ತಿ ಡಾ.ಬಾಬು ಜಗಜೀವನ್‍ ರಾಂ ರವರು ಆಗಿದ್ದಾರೆಎಂದು ಉಸ್ತುವಾರಿ ಸಚಿವ ದಿನೇಶ್‍ ಗುಂಡೂರಾವ್ ಹೇಳಿದರು.

ಅವರು ಶನಿವಾರ ಡಾ.ಬಿ.ಆರ್.ಅಂಬೇಡ್ಕರ್   ಭವನದಲ್ಲಿ ನಡೆದ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ರವರ 118ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಕೃಷಿ ಸಚಿವರಾಗಿ ಬಾಬೂಜಿಯವರು  ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಹಸಿರು ಕ್ರಾಂತಿಯ ಯೋಜನೆಗೆ ಬೆನ್ನೆಲುಬಾಗಿ ನಿಂತು ದೇಶದ ಕೃಷಿ ಕ್ಷೇತ್ರದಲ್ಲಿ ಅದ್ಭುತ ಪ್ರಗತಿಗೆ ಕಾರಣರಾಗಿದ್ದಾರೆ. ಆಹಾರಕ್ಕಾಗಿ ನಾಗರಿಕರು ಸಂಕಟಪಡುತ್ತಿದ್ದ ಕಾಲವನ್ನು ಆಹಾರ ಧಾನ್ಯಗಳ ಹೆಚ್ಚುವರಿ ಸಂಗ್ರಹವಾಗಿ ಪರಿವರ್ತಿಸಲು ಬಾಬೂಜಿ ಸೇವೆ ಸಲ್ಲಿಸಿದ್ದಾರೆ ಎಂದು ಉಸ್ತುವಾರಿ ಸಚಿವರು ಸ್ಮರಿಸಿದರು.

ಕೇಂದ್ರರಕ್ಷಣಾ ಸಚಿವರಾಗಿ ಬಾಪೂಜಿಯವರು ದೇಶದ ಗಡಿಗಳನ್ನು ಬಾಹ್ಯ ಬೆದರಿಕೆಯಿಂದ ಮುಕ್ತಗೊಳಿಸಿದರು. ವಿಶೇಷವಾಗಿ ಬಾಂಗ್ಲಾಯುದ್ಧ ಸಂದರ್ಭದಲ್ಲಿ ಅವರ ನಾಯಕತ್ವ ದೇಶದ ರಕ್ಷಣೆಗೆ ಸಾಕಷ್ಟು ಪರಿಣಾಮ ಬೀರಿತು. ಕಾರ್ಮಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ ಬಾಪೂಜಿಯವರು ಇಎಸ್‍ಐ ವ್ಯವಸ್ಥೆಯನ್ನು ಜಾರಿಗೆ ತರಲು ಶ್ರಮಿಸಿದರು. ಅಲ್ಲದೆ ಹಲವಾರು ಕಾರ್ಮಿಕಪರ ಕಾನೂನುಗಳನ್ನು ಜಾರಿಗೆತರಲು  ಶ್ರಮಿಸಿದರು  ಎಂದು ಸಚಿವ ದಿನೇಶ್‍ ಗುಂಡೂರಾವ್ ಹೇಳಿದರು.

ಸಮಾರಂಭದಲ್ಲಿ ಮೀನುಗಾರಿಕೆ ಕಾಲೇಜಿನ ಪ್ರಾಧ್ಯಾಪಕ ಡಾ.ಶಿವಕುಮಾರ್ ಮಗದ ಅವರು ವಿಶೇಷ ಉಪನ್ಯಾಸ ನೀಡಿದರು. 

ವಿಧಾನ ಪರಿಷತ್ ಸದಸ್ಯ  ಮಂಜುನಾಥ್ ಭಂಡಾರಿ, ಜಿಲ್ಲಾಗ್ಯಾರಂಟಿ  ಅನುಷ್ಠಾನ  ಪ್ರಾಧಿಕಾರದ ಅಧ್ಯಕ್ಷ  ಭರತ್ ಮುಂಡೋಡಿ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್,  ಪೊಲೀಸ್  ಆಯುಕ್ತ ಅನುಪಮ್‍ ಅಗ್ರವಾಲ್  ಮತ್ತಿತರರು ಉಪಸ್ಥಿತರಿದ್ದರು.  ಸಮಾಜಕಲ್ಯಾಣ ಇಲಾಖೆ ಉಪ ನಿರ್ದೇಶಕಿಡಾ. ಬಿ. ಎಸ್. ಹೇಮಲತಾ  ಸ್ವಾಗತಿಸಿ,  ಸಹಾಯಕ ನಿರ್ದೇಶಕ ಸುರೇಶ್‍ ಅಡಿಗ  ವಂದಿಸಿದರು.