ಮಂಗಳೂರು, ಜು.22: ಪ್ರತಿಯೊಂದು ಜನನ ಮರಣದ ನೋಂದಣಿ ಕಡ್ಡಾಯವಾಗಿದ್ದು, ಘಟನೆ ಸಂಭವಿಸಿದ 21 ದಿನಗಳೊಳಗೆ ನಗರ/ ಗ್ರಾಮಪಂಚಾಯತ್ ನೋಂದಣಾಧಿಕಾರಿಗಳ ಮೂಲಕ ನೋಂದಣಿ ಮಾಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜನನ-ಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿ ಬೇರೆ ಜಿಲ್ಲೆಯ ವ್ಯಕ್ತಿಯು ಅಪಘಾತ ಅಥವಾ ಇನ್ನಿತರ ಅಪರಾಧ ಕೃತ್ಯಗಳ ಮೂಲಕ ಸಾವನ್ನಪ್ಪಿದ್ದರೆ ಮರಣ ನೋಂದಣಿಯನ್ನು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿಖರ ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ನೀಡಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ 678 ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಜನನ ಮತ್ತು ಮರಣ ನೋಂದಣಿಯನ್ನು ಯಾವುದೇ ಕಾರಣಕ್ಕೂ ವಿಳಂಬವಾಗಿ ಮಾಡಬಾರದು. ಜನನ ಮತ್ತು ಮರಣ ಘಟನೆಗಳು ನಡೆದ 21 ದಿನದ ನಂತರ ನೋಂದಾಯಿಸಿದರೆ ಅದನ್ನು ತಡನೋಂದಣಿ ಎಂದು ಪರಿಗಣಿಸಿ, ವಿಳಂಬ ಶುಲ್ಕ ರೂ. 20 ನ್ನು ಪಡೆಯಲಾಗುತ್ತದೆ. ತಡ ನೋಂದಣಿಯನ್ನು ಕಡಿಮೆಗೊಳಿಸಲು ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.ತಾಲೂಕು ಮಟ್ಟದಲ್ಲಿ ಜನನ ಮರಣ ನೋಂದಣಿ ಸಮನ್ವಯ ಸಮಿತಿ ಸಭೆಯನ್ನು ನಡೆಸಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಅವರು ಸೂಚಿಸಿದರು. ಜನನ ಮತ್ತು ಮರಣದ ದಾಖಲೆಗಳನ್ನು ಹಾಳಾಗದಂತೆ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಸಂಬಂಧ ಪಟ್ಟ ಇಲಾಖೆಗಳಿಗೆ ಅವರು ಸೂಚಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ. ಆರ್ ಶ್ರೀಧರ್ ಮಾತನಾಡಿ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸುವ ಎಲ್ಲಾ ಜನನ ಮತ್ತು ಮರಣ ಘಟನೆಗಳನ್ನು ನೊಂದಣಾಧಿಕಾರಿಗಳಿಗೆ ವರದಿ ಮಾಡಬೇಕು. ನೋಂದಣಾಧಿಕಾರಿಗಳು ಅಥವಾ ಉಪ ನೋಂದಣಾಧಿಕಾರಿಗಳು ವರದಿ ಮಾಡಿದ ಘಟನೆಗಳನ್ನು ನೋಂದಣಿ ಮಾಡಿ ಪ್ರಕ್ರಿಯೆ ಮುಗಿದ ನಂತರ ಮಾಹಿತಿದಾರರಿಗೆ ಜನನ ಪ್ರಮಾಣ ಪತ್ರವನ್ನು ಒದಗಿಸಬೇಕು. ಗ್ರಾಮ ಒನ್ ಕಚೇರಿಯಲ್ಲಿ ಸಾರ್ವಜನಿಕರು ಜನನ ಮರಣ ನೋಂದಣಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು. ಇ-ಜನ್ಮ ತಂತ್ರಾಂಶದಲ್ಲಿ ಜನನ ಮರಣ ಘಟನೆಗಳನ್ನು ನೋಂದಾಯಿಸುವಾಗ ಆಧಾರ್ ಸಂಖ್ಯೆಯನ್ನು ಅಥವಾ ಇತರೆ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಮರಣ ಘಟನೆಗಳ ಸಂದರ್ಭದಲ್ಲಿ ಮೃತರ ಆಧಾರ್ ನಂಬರ್ ಬದಲು ಅರ್ಜಿದಾರರ ಆಧಾರ್ ನಂಬರ್ ನಮೂದಿಸಿದರೆ, ಸರಕಾರದಿಂದ ಸವಲತ್ತುಗಳು ಸಿಗುವುದಿಲ್ಲ ಎಂದು ಹೇಳಿದರು. ಜಿಲ್ಲೆಯ ಎಲ್ಲಾ ನೋಂದಣಿ ಘಟಕವು ನಿಯಮಾನುಸಾರ ನೋಂದಣಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಹಾಗೂ ಶೇಖಡ 100 ರಷ್ಟು ಘಟನೆಗಳು ದಾಖಲಾತಿಯಾಗಿರುವ ಬಗ್ಗೆ ಪರಿಶೀಲನೆಯನ್ನು ತಾಂತ್ರಿಕ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುತ್ತದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆ ಉಪನಿರ್ದೇಶಕಿ ಸುಷ್ಮಾ ಕೆ. ಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.