ಮಂಗಳೂರು: ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ತುಳು ಭಾಷಿಗರು ಮಾತೃಭಾಷೆ ಕಾಲಮ್ ನಲ್ಲಿ ‘ತುಳು’ ಭಾಷೆ ಎಂದು ನಮೂದಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿನ ತುಳು ಭಾಷಿಗರ ಅಂಕಿ ಅಂಶಗಳ ಸ್ಪಷ್ಟ ಚಿತ್ರಣ ಲಭಿಸುವಂತಾಗಲು ತುಳು ಮಾತೃ ಭಾಷಿಗ ಎಲ್ಲಾ ಜಾತಿ, ಸಮುದಾಯ ಮತ್ತು ಮತದವರು ಸಮೀಕ್ಷೆಯ 15ನೇ ಕಲಂನಲ್ಲಿ ತಮ್ಮ ಮಾತೃ ಭಾಷೆಯನ್ನು 'ತುಳು' ಎಂದು ಉಲ್ಲೇಖಿಸುವಂತೆ ವಿನಂತಿಸಿದ್ದಾರೆ.
ಕರಾವಳಿಯ ಪ್ರೊಟೆಸ್ಟೆಂಟ್ ಕ್ರೈಸ್ತರು ಹಾಗೂ ಜೈನ ಧರ್ಮೀಯರು ಸೇರಿದಂತೆ ಸುಮಾರು 40 ರಷ್ಟು ಜಾತಿ ಸಮುದಾಯದವರು ತುಳು ಮಾತೃ ಭಾಷಿಗರಾಗಿರುತ್ತಾರೆ. ಕರಾವಳಿಯನ್ನು ಹೊರತುಪಡಿಸಿದಂತೆ ಬೆಂಗಳೂರು ಹಾಗೂ ಇತರ ಜಿಲ್ಲೆಗಳಲ್ಲಿ ನೆಲೆಸಿರುವ ಎಲ್ಲಾ ತುಳುವರು ಮಾತೃ ಭಾಷೆ ಪ್ರಶ್ನೆಗೆ ಸ್ಪಷ್ಟವಾಗಿ ‘ತುಳು’ ಎಂದು ಬರೆಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ವಿನಂತಿಸಿದ್ದಾರೆ.