ಮಂಗಳೂರು: ಮಂಗಳೂರಿನ ತೈಲ ಕಂಪೆನಿಯಾದ ಎಂಆರ್‌ಪಿಎಲ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಜತೆಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಚರ್ಚೆ ನಡೆಸಿ ಅವರ ಹಲವಾರು ಸಮಸ್ಯೆ ಆಲಿಸಿದ್ದಾರೆ. ಆ ಮೂಲಕ ಕಾರ್ಮಿಕರಿಗೆ ಆರೋಗ್ಯ ಭದ್ರತೆ, ವಿಮಾ ಸೌಲಭ್ಯ, ವಿಶೇಷ ಭತ್ಯೆ ಮುಂತಾದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಎಂಆರ್‌ಪಿಎಲ್‌ನ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದ.ಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂಸದ ಕ್ಯಾ. ಚೌಟ ಇವರ ನೇತೃತ್ವದಲ್ಲಿ ನಡೆದ ಎಂಆರ್‌ಪಿಎಲ್-ಒಎನ್‌ಜಿಸಿ ಕರ್ಮಚಾರಿ ಸಂಘದ ಸಭೆಯಲ್ಲಿ ಕಾರ್ಮಿಕರ ಕೆಲವೊಂದು ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ತಿಂಗಳಿಗೆ 21,000ರೂ. ಗಿಂತ ಹೆಚ್ಚಿನ ವೇತನ ಪಡೆಯುತ್ತಿದ್ದರೆ ಅಂಥಹ ಕಾರ್ಮಿಕರಿಗೆ ಮೆಡಿಕ್ಲೈಮ್ ಸೌಲಭ್ಯ ಒದಗಿಸಬೇಕು. 8 ವರ್ಷ ಕಳೆದರೂ ವಿಶೇಷ ಭತ್ಯೆ ದ್ವಿಗುಣಗೊಳಿಸಿಲ್ಲ ಎಂದು ಕಾರ್ಮಿಕರು ಹೇಳಿದಾಗ, ಈ ಬಗ್ಗೆ ಪರಿಶೀಲಿಸಿ ಸ್ಪೆಷಲ್ ಭತ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಕ್ಯಾ. ಚೌಟ ಅವರು ಎಂಆರ್‌ಪಿಎಲ್‌ಗೆ ಸೂಚಿಸಿದ್ದಾರೆ.
ಎಂಆರ್‌ಪಿಎಲ್ ಕಂಪೆನಿಯಲ್ಲಿ ದುಡಿಯುತ್ತಿರುವ ಕಾರ್ಮಿಕರು ಕೆಲಸದ ವೇಳೆ ಅಥವಾ ಕಂಪೆನಿ ಹೊರಗಡೆ ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ನೀಡುವ 10 ಲಕ್ಷ ವಿಮಾ ಮೊತ್ತವನ್ನು 25 ಲಕ್ಷ ರೂ.ಗೆ ಹೆಚ್ಚಿಸಬೇಕು ಹಾಗೂ ಇತರೆ ಸೌಲಭ್ಯಗಳನ್ನು ಕೂಡ ಕಲ್ಪಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅಷ್ಟೇ ಅಲ್ಲದೆ, ಕಾರ್ಮಿಕರು ಉಲ್ಲೇಖಿಸಿರುವ ಪ್ರಮುಖ ಸಮಸ್ಯೆಗಳನ್ನು ಪರಿಶೀಲಿಸಿ ಮೂರು ದಿನದೊಳಗೆ ಲಿಖಿತವಾಗಿ ಉತ್ತರ ನೀಡುವಂತೆಯೂ ಕ್ಯಾ. ಚೌಟ ಅವರು ಎಂಆರ್‌ಪಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾರ್ಮಿಕರ ಸಮಸ್ಯೆಯನ್ನು ಮುತುವರ್ಜಿಯಿಂದ ಆಲಿಸಿ, ಮನವಿ- ಬೇಡಿಕೆಗಳನ್ನು ಮುಂದಿಡಲು ಸೂಕ್ತ ವೇದಿಕೆ ಕಲ್ಪಿಸಿ , ಅದಕ್ಕೆ ಪರಿಹಾರ ಒದಗಿಸಲು ಪ್ರಯತ್ನಿಸುತ್ತಿರುವ ಸಂಸದರಿಗೆ ಎಂಆರ್‌ಪಿಎಲ್-ಒಎನ್‌ಜಿಸಿ ಕರ್ಮಚಾರಿ ಸಂಘ ಇದೇ ವೇಳೆ ಧನ್ಯವಾದ ಸಲ್ಲಿಸಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್, ಸಹಾಯಕ ಕಾರ್ಮಿಕ ಆಯುಕ್ತ (ಕೇಂದ್ರ)ರಾದ ಪ್ರಕಾಶ್ ಆರ್., ಲೇಬರ್ ಏನ್ಫೋರ್ಸ್ಮೆಂಟ್ ಆಫೀಸರ್ ನಿತಾ ರೆಬೆಲೋ, ಸಹಾಯಕ ಕಾರ್ಮಿಕ ಆಯುಕ್ತ (ರಾಜ್ಯ)ರಾದ ನಜೀಯ ಬಾನು, ಎಂಆರ್‌ಪಿಎಲ್ ಕರ್ಮಚಾರಿ ಸಂಘದ ಸ್ಥಾಪಕರಾದ ಪ್ರಶಾಂತ್ ಮೂಡೈಕೊಡಿ ಹಾಗೂ ಎಂಆರ್‌ಪಿಎಲ್ ಕರ್ಮಚಾರಿ ಸಂಘದ ಅಧ್ಯಕ್ಷ ನಿತಿನ್ ಬಿಸಿ ರೋಡ್, ಪ್ರಸಾದ್ ಅಂಚನ್, ಸುರೇಂದ್ರ ಭಟ್, ಪುರುಷೋತ್ತಮ್, ಸುನಿಲ್ ಬೋಳ ಹಾಗೂ ಎಂಆರ್‌ಪಿಎಲ್ ಸಂಸ್ಥೆ ಅಧಿಕಾರಿಗಳಾದ ಕೃಷ್ಣ ಹೆಗ್ಡೆ, ಮನೋಜ್ ಕುಮಾರ್, ರೋಶನ್ ಉಪಸ್ಥಿತರಿದ್ದರು.