ಮಂಗಳೂರು:  ಮಹಾನಗರ ಪಾಲಿಕೆ ವ್ಯಾಪ್ತಿಯ ಬೆಂಗ್ರೆ ವಾರ್ಡಿನ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ, ಸ್ಯಾಂಡ್ಸ್ ಪಿಟ್ ಇಲ್ಲಿನ ವಿವೇಕ ಶಾಲಾ ಕೊಠಡಿ ನಿರ್ಮಾಣ ಯೋಜನೆಯಡಿ 28 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ಎರಡು ನೂತನ ತರಗತಿಗಳ ಕೊಠಡಿಗಳನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. 

ನಂತರ ಮಾತನಾಡಿದ ಶಾಸಕರು, ನಾನು ಕೂಡ ಸರ್ಕಾರಿ ಶಾಲೆಯಲ್ಲೇ ಕಲಿತವನಾಗಿದ್ದು ಈ ಶಾಲೆಗಳ ಬಗ್ಗೆ ವಿಶೇಷ ಕಾಳಜಿ ಹಾಗೂ ಮುತುವರ್ಜಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ. ಸ್ಯಾಂಡ್ಸ್ ಪಿಟ್ ಬೆಂಗ್ರೆಯಲ್ಲಿರುವ ಶಾಲೆಗೆ ತುರ್ತಾಗಿ ಬೇಕಿದ್ದ ಕೊಠಡಿಗಳ ಬಗ್ಗೆ ಇಲ್ಲಿನ ಪ್ರಮುಖರು ನನ್ನ ಗಮನಕ್ಕೆ ತರಲಾಗಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿದ್ದ ಶ್ರೀ ನಾಗೇಶ್ ರವರಲ್ಲಿ ಮನವಿ ಮಾಡಿದ್ದೆ. ಅದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದ ಕಾರಣ ಈ ಶಾಲೆಯೂ ಸೇರಿದಂತೆ ಒಟ್ಟಾರೆಯಾಗಿ 35 ಕೊಠಡಿಗಳು ಅನುಷ್ಠಾನಕ್ಕೆ ಬಂದಿವೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಒಂದಷ್ಟು ಯೋಜನೆಗಳು ಅನುಷ್ಠಾನಕ್ಕೆ ಬರದೇ ಬಾಕಿ ಉಳಿದಿದ್ದು ಅವುಗಳ ಅನುಷ್ಠಾನಕ್ಕೂ ವಿಶೇಷ ಪ್ರಯತ್ನವನ್ನೂ ಮಾಡಲಾಗುವುದು, ಸರ್ಕಾರಿ ಶಾಲೆಗಳ ಅಭಿವೃದ್ಧಿಯ ವಿಷಯದಲ್ಲಿ ನನ್ನ ನಿಲುವು ಅಚಲ ಎಂದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತ, ಶಿಕ್ಷಣಾಧಿಕಾರಿಗಳು, ಪಾಲಿಕೆ ಸದಸ್ಯರುಗಳಾದ ಮನೋಹರ್ ಕದ್ರಿ, ಕಿಶೋರ್ ಕೊಟ್ಟಾರಿ, ಮುನೀಬ್ ಪ್ರಮುಖರಾದ ಗಂಗಾಧರ್ ಸಾಲ್ಯಾನ್, ಮೀರಾ ಕರ್ಕೇರ, ಪುಂಡಲೀಕ ಮೈಂದರ್, ಸಂಧ್ಯಾ ಸುವರ್ಣ, ಮಾಧವ ಸುವರ್ಣ, ರಾಕೇಶ್ ಸಾಲ್ಯಾನ್, ಶಾಲಾಭಿವೃದ್ಧಿ ಸಮಿತಿ, ಶಾಲಾ ಸಿಬ್ಬಂದಿಗಳು ಹಾಗೂ ವಾರ್ಡಿನ ಕಾರ್ಯಕರ್ತರ ಸಹಿತ ಅನೇಕ ಪ್ರಮುಖರು ಉಪಸ್ಥಿತರಿದ್ದರು.