ಮಂಗಳೂರು: ಸೌಹಾರ್ದತೆ ನಮ್ಮ ಬದುಕಿನ ಮೂಲ ಧ್ಯೇಯವಾಗಬೇಕು, ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳುವ ಸಂದರ್ಭದಲ್ಲಿ ಜಾತಿ, ಮತ ತಾರತಮ್ಯವನ್ನು ಮೀರಿ ನಿಂತು ಸಾಧನೆಯನ್ನು ಮಾಡಬೇಕು. ಸೌಹಾರ್ದತೆ ಅನ್ನುವುದು ನಮ್ಮ ನಾಡಿನ ಪರಂಪರೆಯಾಗಿದೆ, ಈ ಆಶಯದಂತೆ ಬದುಕು ರೂಪಿಸಿಕೊಳ್ಳುವುದು ಪ್ರತಿಯೊಬ್ಬರ ಜವಬ್ದಾರಿ ಆಗಿದೆ ಎಂದು ಖ್ಯಾತ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಅವರು ಹೇಳಿದರು.
ಅವರು ಮಂಗಳೂರಿನ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ ರಂಗಚಲನ ತಂಡ ಅಭಿನಯಿಸಿದ ತುಳುನಾಡ ಸೌಹಾರ್ದ ಪರಂಪರೆಯನ್ನು ಬಿಂಬಿಸುವ “ಜಾಗ್ ರ್ತೆ” ನಾಟಕದ ಮೂರನೇ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಹಿರಿಯ ನಾಟಕ , ಚಲನಚಿತ್ರ ನಟರಾದ ಲಕ್ಷ್ಮಣ ಕುಮಾರ್ ಮಲ್ಲೂರು, ಹಾಗೂ ಸದಾಶಿವ ಅಮೀನ್ ಅವರು ಮಾತನಾಡಿ ಸೌಹಾರ್ದ ಸಂದೇಶವನ್ನು ನಾಟಕದ ಮೂಲಕ ನೀಡಿದಾಗ ಅದು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಲುಪುವುದು ಎಂಬ ಆಶಯ ವ್ಯಕ್ತಪಡಿಸಿದರು.
ಸಂತ ಅಲೋಶಿಯಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಂ. ರೆ.ಫಾ. ಜಾನ್ಸನ್ ಪಿಂಟೋ ಎಸ್ ಜೆ ಅವರು ಶುಭಕೋರಿ ಮಾತನಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು.
ಉಪಪ್ರಾಂಶುಪಾಲರಾದ ಲ್ಯಾನ್ಸಿ ಡಿಸೋಜಾ ಅವರು ವಂದಿಸಿದರು. ಶಿಕ್ಷಕಿ ಫೆಲ್ಸಿ ಲೋಬೋ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.