ಮಂಗಳೂರು: ಸಪ್ತಕ ಬೆಂಗಳೂರು, ಚಿರಂತನ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಹಾಗೂ ಶ್ರೀ ರಾಮಕೃಷ್ಣ ಮಠ ಮಂಗಳೂರು ವತಿಯಿಂದ ಹಿರಿಯ ತಬಲಾ ಕಲಾವಿದ ಪಂ.ಓಂಕಾರ್ ಗುಲ್ವಾಡಿ ಅವರ 80ನೇ ಜನ್ಮ ಸಂವತ್ಸರದ ಆಚರಣೆಯ ಸಂಭ್ರಮ ಹಾಗೂ ಸಂಗೀತ ಸನ್ಮಾನ ಕಾರ್ಯಕ್ರಮ ಏ.13 ರಂದು ಸಾಯಂಕಾಲ 5ಕ್ಕೆ ನಗರದ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ .
ಮಂಗಳೂರಿನ ಯುವ ಸಿತಾರ್ ಕಲಾವಿದ ಅಂಕುಶ್ ನಾಯಕ್ ಹಾಗೂ ಯುವ ಬಾನ್ಸುರಿ ಕಲಾವಿದ ಕಾರ್ತಿಕ್ ಭಟ್ ಅವರ ಸಿತಾರ್-ಬಾನ್ಸುರಿ ಜುಗಲ್‌ಬಂದಿ ಕಛೇರಿಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಯುವ ತಬಲಾ ಕಲಾವಿದ ಹೇಮಂತ್ ಜೋಷಿ ಸಾಥ್ ನೀಡಲಿದ್ದಾರೆ ಎಂದು ಚಿರಂತನ ಚಾರಿಟೇಬಲ್ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಭಾರವಿ ದೇರಾಜೆ ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಲತಃ ಮಂಗಳೂರಿನವರಾದ ಪಂ. ಓಂಕಾರ್ ಗುಲ್ವಾಡಿಯವರಿಗೆ ಗೌರವಾರ್ಪಣಾ ಕಾರ್ಯಕ್ರಮ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಂಗಳೂರಿನಲ್ಲಿ ಶಾಸೀಯ ಸಂಗೀತದ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆಗಳಾದ ಸಂಗೀತ್ ಭಾರತಿ ಫೌಂಡೇಶನ್, ಸ್ವರಾನಂದ್ ಪ್ರತಿಷ್ಠಾನ, ಸುರಭಿ, ಕಲಾಸಾಧನಾ, ಅಕಾಡೆಮಿ ಹಿಂದುಸ್ಥಾನಿ ಮ್ಯೂಸಿಕ್, ಅಭಿನವ ಸ್ವರಶಾಲಾ, ಧ್ಯಾನ್ ಸಂಗೀತ್ ಅಕಾಡೆಮಿ, ನಾರಾಯಣಿ ಸಂಗೀತ ಕಲಾಕೇಂದ್ರ, ಕಲಾ ಕೋಸ್ಟ್, ಮ್ಯಾಕ್ಸ್
ಮೀಡಿಯಾ ಸಂಸ್ಥೆಗಳು ಪಂ.ಓಂಕಾರ್ ಗುಲ್ವಾಡಿ ಅವರನ್ನು ಸನ್ಮಾನಿಸಲಿವೆ ಎಂದು ಅವರು ತಿಳಿಸಿದರು.
ಸನ್ಮಾನ ಕಾರ್ಯಕ್ರಮದ ಬಳಿಕ ಪಂ. ವೆಂಕಟೇಶ್ ಕುಮಾರ್ ಧಾರವಾಡ ಅವರ ಶಾಸೀಯ ಸಂಗೀತ ಕಛೇರಿ ನಡೆಯಲಿದೆ. ಪಂ. ಓಂಕಾರ್ ಗುಲ್ವಾಡಿಯವರು ತಬಲಾ ಹಾಗೂ ಪಂ. ಸುಧೀರ್ ನಾಯಕ್ ಸಂವಾದಿನಿಯಲ್ಲಿ ಸಾಥ್ ನೀಡಲಿದ್ದಾರೆ ಎಂದು ಅವರು ತಿಳಿಸಿದರು. ಧ್ಯಾನ್ ಸಂಗೀತ್ ಅಕಾಡೆಮಿ ಸ್ಥಾಪಕ, ಗುರು ಅಮಿತ್ ಕುಮಾರ್ ಬೆಂಗ್ರೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.