ಮಂಗಳೂರು, ಜೂ. 6:  ಮೇ 29ರಂದು ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಬೆಂಗರೆಯ ಇಬ್ಬರು ಮೀನುಗಾರರ ಮನೆಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ  ಶುಕ್ರವಾರ ಭೇಟಿ ನೀಡಿದರು.

ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವರು, ಪ್ರತಿ ಕುಟುಂಬಕ್ಕೆ ಮಿನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ  ತಲಾ 10 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದರು. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಇನ್ನೂ ನಡೆಯುತ್ತಿದೆ. ರಾಜ್ಯ ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಸಚಿವರು ತಿಳಿಸಿದರು.

ಸಂಕಷ್ಟ ಪರಿಹಾರ ನಿಧಿಯಿಂದ ಮೀನುಗಾರರ ಕುಟುಂಬಗಳಿಗೆ ಇದುವರೆಗೆ 8 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು. ರಾಜ್ಯ ಸರಕಾರ ಇದನ್ನು 10 ಲಕ್ಷ ರೂ. ಗಳಿಗೇರಿಸಿದೆ ಎಂದು ಸಚಿವರು ತಿಳಿಸಿದರು.

ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಐವನ್ ಡಿಸೋಜಾ, ಮೀನುಗಾರಿಕೆ ನಿರ್ದೇಶಕ ದಿನೇಶ್ ಕುಮಾರ್, ಜಂಟಿ ನಿರ್ದೇಶಕ ಸಿದ್ಧಯ್ಯ, ಉಪ ನಿರ್ದೇಶಕ ದಿಲೀಪ್ ಕುಮಾರ್, ಮೀನುಗಾರ ಸಂಘಟನೆಗಳ ಮುಖಂಡರು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.