ಮಂಗಳೂರು,ನ.25:  ಈ ಸಾಲಿನಲ್ಲಿ ಹಿಂಗಾರು ಮಳೆ ಹೆಚ್ಚಾಗಿದ್ದು ಹಾಗೂ ಈಗಾಗಲೇ ಚಳಿಗಾಲ ಆರಂಭವಾಗುತ್ತಿರುವುದರಿಂದ ನೊಣ, ಸೊಳ್ಳೆಗಳು ಜಾಸ್ತಿಯಾಗಿ ರೋಗ ಉಲ್ಬಣವಾಗುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ಚರ್ಮಗಂಟು ರೋಗೋದ್ರೆಕ ಕಂಡುಬಂದಿರುವ ಹಿನ್ನಲೇಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ದ.ಕ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗದ ವಿರುದ್ಧ ಉಚಿತ ಲಸಿಕಾ ಅಭಿಯಾನವನ್ನು ಜಿಲ್ಲೆಯಾದ್ಯಂತ ನವೆಂಬರ್ 25ರಿಂದ ಡಿಸೆಂಬರ್ 5ರವರೆಗೆ ಹಮ್ಮಿಕೊಳ್ಳಲಾಗಿದೆ.

ಚರ್ಮಗಂಟು ರೋಗವು ವೈರಸ್‍ನಿಂದ ಬರುವ ಸಾಂಕ್ರಮಿಕ ರೋಗವಾಗಿದ್ದು, ರೋಗ ತಗುಲಿದ ಜಾನುವಾರುಗಳಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳಲಿದ್ದು, ಬಳಿಕ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುತ್ತದೆ. ಈ ರೋಗವು ನೊಣ, ಸೊಳ್ಳೆ ಹಾಗೂ ಉಣ್ಣೆಗಳಿಂದ ಹರಡುವ ಸಾಧ್ಯತೆ ಇದ್ದು, 2 ರಿಂದ 5 ಶೇಕಡಾ ಜಾನುವಾರುಗಳು ಈ ರೋಗದಿಂದ ಸಾವನ್ನಪ್ಪುವ ಸಾಧ್ಯತೆ ಇದೆ.

ಈ ರೋಗವು ದೇಶಾದ್ಯಂತ ಮೊದಲಿಗೆ ನವೆಂಬರ್ 2022 ರಲ್ಲಿ ಕಾಣಿಸಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 400 ಕ್ಕೂ ಅಧಿಕ ಜಾನುವಾರುಗಳು ಮರಣ ಹೊಂದಿ ಹಾಲಿನ ಇಳುವರಿ ಕೂಡಾ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಚರ್ಮಗಂಟು ರೋಗಕ್ಕೆ ಲಸಿಕೆಯೊಂದೆ ಪರಿಹಾರವಾಗಿದ್ದು, ಇಲಾಖೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ ಎಲ್ಲಾ ಜಾನುವಾರುಗಳಿಗೆ ಈಗಾಗಲೇ 3 ಬಾರಿ ಈ ರೋಗದ ವಿರುದ್ಧ ಲಸಿಕೆಯನ್ನು ಹಾಕಲಾಗಿದ್ದು, ಯಾವುದೇ ರೋಗೋದ್ರೆಕ ಕಂಡುಬಂದಿರುವುದಿಲ್ಲ.

4 ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಈ ಹಿಂದೆ ಲಸಿಕೆಯನ್ನು ಹಾಕಿಸಿದರೂ ಸಹಾ ಹೈನುಗಾರರು ಈ ಬಾರಿಯೂ ಕೂಡಾ ತಮ್ಮ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸುವಂತೆ ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಹೈನುಗಾರರು ಲಸಿಕೆಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಅಥವಾ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ,  ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.