ಮಂಗಳೂರು: ಅದೆಷ್ಟೋ ಮಹಿಳೆಯರು ಇಂದಿಗೂ ತಮ್ಮ ನಿರ್ಧಾರಗಳನ್ನು ತಾವೇ ಕೈಗೊಳ್ಳಲು ಸಾಧ್ಯವಾಗದೇ ಸಮಾಜದಲ್ಲಿ ತಮ್ಮ ಸ್ವಂತ ಹಕ್ಕಿಗಾಗಿ ಈಗಲೂ ಹೋರಾಟ ನಡೆಸುತ್ತಿದ್ದಾರೆ ಎಂದು ಮಂಗಳೂರು ಸಹಾಯಕ ಪೊಲೀಸ್ ಆಯುಕ್ತೆ (ಟ್ರಾಫಿಕ್) ನಜ್ಮಾ ಫಾರೂಕಿ ಹೇಳಿದರು. 

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಮಹಿಳಾ ವೇದಿಕೆ, ಮಹಿಳಾ ಕೋಶ, ಸ್ಪರ್ಶ್ ಮತ್ತು ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃತಕ ಬುದ್ಧಿಮತ್ತೆ ಜನಪ್ರಿಯವಾಗುತ್ತಿರುವ ಈ ಕಾಲದಲ್ಲೂ ಮಹಿಳೆಯರು ಇಂದಿಗೂ ತಮ್ಮ ಸಾಮಥ್ರ್ಯವನ್ನು ಪದೆಪದೇ ಸಾಬೀತು ಪಡಿಸಬೇಕಾಗಿ ಬಂದಿದೆ. ಇಂದು ನಾವೆಲ್ಲರೂ ಅದೆಷ್ಟೋ ಸಾಧಕಿಯರನ್ನು ಸಂಭ್ರಮಿಸುತ್ತಿದ್ದೇವೆ. ಆದರೂ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗದೇ ಇರುವುದು ವಿಪರ್ಯಾಸ. ಮಹಿಳೆಯರಿಗೆ ಕೇವಲ ಮನೆ ಮಾತ್ರವಲ್ಲದೇ ವೃತ್ತಿ ಕ್ಷೇತ್ರದಲ್ಲೂ ಸಾಕಷ್ಟು ಜವಾಬ್ದಾರಿಗಳನ್ನು ಹೊರಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು. 

ಮಹಿಳೆಯು ತನ್ನ ಬದುಕಿನ ಕುರಿತಾಗಿ ಸ್ವಂತ ನಿರ್ಧಾರ ಕೈಗೊಳ್ಳುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಮಹಿಳೆ ತನ್ನ ಗುರುತನ್ನು ಮೂಡಿಸಲು ಸಾಧ್ಯವಾಗುತ್ತದೆ. ಆ ಮೂಲಕ ಸಮಾಜದಲ್ಲಿ ಮಹಿಳಾ ಸಬಲೀಕರಣಸಾಧ್ಯವಾಗಿಸಬಹುದಾಗಿದೆ ಎಂದು ನಾರಿ ಶಕ್ತಿಯನ್ನು ಎಚ್ಚರಗೊಳಿಸಿದರು. 

ಗೌರವ ಅತಿಥಿಯಾಗಿದ್ದ ಉದ್ಯಮಿ ದಿವ್ಯಾ ರೈ, ಬದುಕಿನಲ್ಲಿ ಯಾವುದೇ ಸಮಯದಲ್ಲೂ ಛಲ ಮತ್ತು ವಿಶ್ವಾಸ ಬಿಡದೇ ತನ್ನ ಸಾಮಥ್ರ್ಯದ ಮೇಲೆ ನಂಬಿಕೆಯಿಟ್ಟು ಮುಂದೆ ಸಾಗಿದರೆ ಏನನ್ನೂ ಸಾಧಿಸಲು ಸಾಧ್ಯವಿದೆ. ಯಾವುದೇ ಸನ್ನಿವೇಶದಲ್ಲೂ ರಾಜಿ ಮಾಡಿಕೊಳ್ಳದೇ ಗುರಿಯೆಡೆಗೆ ಸಾಗಬೇಕಿದೆ ಎಂದು ಸಲಹೆ ನೀಡಿದರು. 

ಬ್ಯಾಂಕ್ ಆಫ್ ಬರೋಡಾದ ಹಿರಿಯ ವ್ಯವಸ್ಥಾಪಕಿ ಸುಗುಣಾವತಿ, ಸಮಾಜದಲ್ಲಿ ಮಹಿಳೆಯರ ಜೊತೆಗೆ ಪುರುಷರ ಪಾತ್ರವೂ ಪ್ರಮುಖವಾಗಿದೆ. ಇಲ್ಲಿ ಯಾರನ್ನೂ ಮೇಲು-ಕೀಳು ಎಂದು ಭಾವಿಸದೇ ಎಲ್ಲರೂ ಸಮಾನರು ಎಂಬ ನಿಟ್ಟಿನಲ್ಲಿ ಆಲೋಚಿಸಿ ಪರಸ್ಪರ ಸಹಕಾರ ಮತ್ತು ಸಹಬಾಳ್ವೆಯಿಂದ ಬದುಕನ್ನು ಸವೆಸಬೇಕಿದೆ. ಮಹಿಳೆ ಮತ್ತು ಪುರುಷ ಇಬ್ಬರೂ ಒಂದೇ ಬಂಡಿಯ ಎರಡು ಚಕ್ರಗಳಿದ್ದಂತೆ. ಇಬ್ಬರಿಗೂ ಸಮಾನ ಜವಾಬ್ದಾರಿಗಳಿವೆ ಎಂಬುದನ್ನು ಅರಿತು ಮುಂದೆ ಸಾಗಬೇಕಿದೆ ಎಂದು ವಿವರಿಸಿದರು. 

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಇದೇ ಬಹುಮಾನ ವಿತರಿಸಲಾಯಿತು. ಅಲ್ಲದೇ, ಕಾಲೇಜಿನ ಹಿರಿಯ ಸಹ ಪ್ರಾಧ್ಯಾಪಕಿ ಅರುಣಾ ಕುಮಾರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ವಹಿಸಿದ್ದರು. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಸಿದ್ಧರಾಜು ಎಂ. ಎನ್., ಮಹಿಳಾ ವೇದಿಕೆ ಸಂಯೋಜಕಿ ಡಾ. ಭಾರತಿ ಪ್ರಕಾಶ್, ಮಹಿಳಾ ಕೋಶದ ಸಂಯೋಜಕಿ ಪ್ರೊ. ನಾಗರತ್ನ ರಾವ್, ಸ್ಪರ್ಶ್‍ನ ಸಂಚಾಲಕಿ ಪ್ರೊ. ಸುಭಾಷಿಣಿ ಶ್ರೀವತ್ಸ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.