ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ಮುಲ್ಕಿ ಕ್ಷೇತ್ರದ ವ್ಯಾಪ್ತಿಯ ಪಶು ಸಂಗೋಪನ ಇಲಾಖೆಯಲ್ಲಿ ಒಟ್ಟು 18 ಸಿಬ್ಬಂದಿಗಳ ಕೊರತೆ ಇದೆ. ಕಂಟ್ರಾಕ್ಟ್ ಬೇಸಿಸ್ ನಲ್ಲಿ ನೇಮಕ ಮಾಡಲಾದ ಎಂಟು ಮಂದಿ ಅಧಿಕಾರಿಗಳಲ್ಲಿ ಕೂಡ ಇಬ್ಬರು ಕೆಲಸವನ್ನು ಬಿಟ್ಟು ತೆರಳಿರುತ್ತಾರೆ.
ಆ ಪ್ರಕಾರದಲ್ಲಿ ಕಂಟ್ರಾಕ್ಟ್ ಬೇಸಿಸ್ ನಲ್ಲಿ ತೆಗೆದುಕೊಂಡ ಸಿಬ್ಬಂದಿಗಳನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಸ್ವತಹ ಸಚಿವ ವೆಂಕಟೇಶ್ ಅವರೇ ವಿಧಾನಸಭೆಯಲ್ಲಿ ಉತ್ತರಿಸಿರುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಉಮಾನಾಥ ಕೋಟ್ಯಾನ್ ಅವರು ಗ್ರಾಮೀಣ ಪ್ರದೇಶದ ಕೃಷಿ, ಹೈನುಗಾರಿಕೆ, ಪಶುಸಂಗೋಪನೆ ಇಲಾಖೆಯಲ್ಲಿ ಅಧಿಕಾರಿಗಳೇ ಇಲ್ಲದೆ ಇದ್ದಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಆದರೂ ಹೇಗೆ ಸಾಧ್ಯ ಎಂದು ಪ್ರಶ್ನಿಸಿರುತ್ತಾರೆ. ನೇಮಕ ಮಾಡಲಾದ ಅಧಿಕಾರಿಗಳು ನೇಮಿಸಿದ ಪ್ರದೇಶಕ್ಕೆ ತೆರಳುವುದಿಲ್ಲ ಎಂದಾದಲ್ಲಿ ಸಚಿವರು ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎನ್ನುವುದು ಸಾಬೀತಾಗಿದೆ ಎಂದು ತಿಳಿಸಿರುತ್ತಾರೆ. ಹಿರಿಯ ಸಚಿವರಾಗಿದ್ದರು ಈ ರೀತಿ ಇಲಾಖೆಯಲ್ಲಿ ಸಮರ್ಪಕತೆ ಕಾಯ್ದುಕೊಳ್ಳಲು ಸಾಧ್ಯವಾಗದೇ ಇರುವುದು ಯಾವುದರ ದ್ಯೋತಕ ಎಂದು ಪ್ರಶ್ನಿಸಿದ್ದಾರೆ. ಕಂಟ್ರಾಕ್ಟ್ ಬೇಸಿಸ್ ನಲ್ಲಿ ಒಂದು ವೇಳೆ ನೇಮಕಗೊಂಡವರು ಸಂಬಂಧ ಪಟ್ಟ ಕ್ಷೇತ್ರಕ್ಕೆ ತೆರಳದೇ ಇದ್ದಲ್ಲಿ ಅಂತವರನ್ನು ಶಾಶ್ವತವಾಗಿ ನೇಮಕಾತಿಯಿಂದ ಹೊರಗಿಡುವುದೇ ಶ್ರೇಯಸ್ಕರ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಕೆಲಸವಿಲ್ಲದೆ ಸಾವಿರಾರು ಮಂದಿ ಅಂಡಲೆಯುತ್ತಿರುವಾಗ ಕೆಲಸ ಸಿಕ್ಕಿದವರು ಸಿಕ್ಕಿದ ಕೆಲಸಕ್ಕೆ ಸೇರ್ಪಡೆಯಾಗದೆ ಇರುವುದು ನಮ್ಮ ದೌರ್ಭಾಗ್ಯ ಎಂದು ಗ್ರಾಮೀಣ ಜನರು ಆಡಿಕೊಳ್ಳುತ್ತಿದ್ದಾರೆ.
ಆದುದರಿಂದ ಯಾವುದೇ ಸಚಿವರಾದರೂ ಕೂಡ ನೇಮಕಾತಿ ಮಾಡಿದ ತಕ್ಷಣ ಸಂಬಂಧಪಟ್ಟ ವ್ಯಕ್ತಿಗಳು ಸೂಕ್ತ ನೇಮಕಗೊಂಡ ಪ್ರದೇಶಕ್ಕೆ ತೆರಳಿ ದಾಖಲಾಗದೆ ಇದ್ದಲ್ಲಿ ಅಂತವರನ್ನು ಶಾಶ್ವತವಾಗಿ ನೇಮಕಾತಿಯಿಂದ ಹೊರಗಿಡಲು ಯೋಚಿಸಬಹುದಾಗಿದೆ. ಏಕೆಂದರೆ ಹಲವಾರು ವರ್ಷಗಳಿಂದ ಪಶುಸಂಗೋಪನ ಅಧಿಕಾರಿಗಳು ಕರ್ತವ್ಯ ನಿರ್ವಹಿಸದೆ ಇರುವ ಕಾರಣದಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಅತ್ಯಂತ ಹೆಚ್ಚು ತೊಂದರೆಗಳು ಉಂಟಾಗಿರುವುದು, ಕೃಷಿ, ಹೈನುಗಾರಿಕೆ, ಪಶು ಸಂಗೋಪನೆಗಳಲ್ಲಿ ತೀವ್ರ ತರದ ಲೋಪ ದೋಷಗಳಾಗಿರುವುದು ಕಂಡುಬಂದಿರುತ್ತದೆ. ಹೀಗಾಗಿ ಇಡೀ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲಾ ಪಶುಸಂಗೋಪನ ಅಧಿಕಾರಿಗಳ ಕೊರತೆಗಳನ್ನು ನೀಗಿಸುವ ಮಹತ್ತರವಾದ ಕೆಲಸವನ್ನು ಸರಕಾರ, ಸಚಿವರು ಮಾಡಬೇಕಾದ ಅನಿವಾರ್ಯತೆ ಇದೆ.