ಮಂಗಳೂರು:  ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಸಹಾಯವಾಣಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದಲ್ಲಿ “ಮಾನವ ಕಳ್ಳ ಸಾಗಣಿಕೆ ತಡೆ ದಿನಾಚರಣೆ ಹಾಗೂ ಬಾಲ್ಯವಿವಾಹ ನಿಷೇಧ  ಕಾಯ್ದೆ ಮತ್ತು ಮಕ್ಕಳ ಸಹಾಯವಾಣಿ ಕುರಿತು ತರಬೇತಿ ಕಾರ್ಯಾಗಾರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಬುಧವಾರ ನಡೆಯಿತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಜೈಬುನ್ನಿಸಾ  ಕಾರ್ಯಕ್ರಮ ಉದ್ಘಾಟಿಸಿ, ಮಾನವ ಸಾಗಣಿಕೆ ತಡೆ ಪ್ರತಿಜ್ಞಾ ವಿಧಿ ಬೋಧಿಸಿ, ಮಾನವ ಕಳ್ಳಸಾಗಾಣಿಕೆ ಪಿಡುಗಾಗಿ ಪರಿಣಮಿಸಿದ್ದು ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ಆಯೋಜಿಸರುವುದು ಶ್ಲಾಘನೀಯ ಎಂದು ಹೇಳಿದರು.

ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ  ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯಡಿಯಲ್ಲಿ ಪೊಲೀಸರು, ವಕೀಲರು ಇತರ ಸರಕಾರಿ ಇಲಾಖೆಗಳು ಮಾತ್ರವಲ್ಲದೇ ಸಾರ್ವಜನಿಕರ  ಹಾಗೂ ಸಂಘಸಂಸ್ಥೆಗಳ ಪ್ರಯತ್ನ ಮತ್ತು ಪಾತ್ರ ಅತಿಅಗತ್ಯ ಎಂದು ಸಭೆಗೆ ತಿಳಿಸಿದರು.

ತರಬೇತಿ ಕಾರ್ಯಾಗಾರವು ಎರಡು  ಅಧಿವೇಶನಗಳಲ್ಲಿ ಆಯೋಜಿಸಲಾಗಿದ್ದು, ಮೊದಲನೇ ಅವಧಿಯ ತರಬೇತಿಯಲ್ಲಿ ಪ್ರೇಮಾನಂದ ಕಲ್ಮಾಡಿ ಅವರು ಮಾನವ ಕಳ್ಳ ಸಾಗಣಿಕೆಯ ವ್ಯಾಖ್ಯಾನ, ಪ್ರಸ್ತುತ ನಡೆಯುತ್ತಿರುವ ವಿವಿಧ ರೀತಿಯ ಮಾನವ ಕಳ್ಳಸಾಗಾಣಿಕೆಗಳ ಬಗ್ಗೆ ಶಿಕ್ಷಣಾರ್ಥಿಗಳಿಗೆ ತಿಳಿಸಿದರು. ಎರಡನೇ ಅವಧಿಯ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ   ಸಿಸ್ಟರ್ ದುಲ್ಸಿನ್ ಇವರು ಮಾನವ ಕಳ್ಳ ಸಾಗಾಣಿಕೆ ಎಂದರೇನು, ಕಾರಣ, ಪರಿಣಾಮ, ತಡೆಗಟ್ಟುವ ಕಾಯಿದೆಗಳು,ಮಕ್ಕಳ ಹಕ್ಕುಗಳು, ಬಾಲ್ಯವಿವಾಹ ನಿಷೇಧ ಹಾಗೂ ಅವರಿಗೆ ಇರುವ ಸರಕಾರ ವಿವಿಧ ಸೌಲಭ್ಯಗಳು ಮುಂತಾದವುಗಳ ಕುರಿತು ಮಾಹಿತಿಯನ್ನು ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ ಸ್ವಾಗತಿಸಿದರು. ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಕೆ ಎಂ, ವಂದಿಸಿ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಜಿಲ್ಲಾ ಮಿಷನ್ ಸಂಯೋಜಕಿ ಅನುಷ್ಯ  ಇವರು ಕಾರ್ಯಕ್ರಮ ನಿರೂಪಿಸಿದರು.