ಕಾರ್ಕಳ: ಈ ಹಿಂದೆ ಕಾರ್ಕಳದ ಜನರಿಗೆ ಏಕ ವಿನ್ಯಾಸನಕ್ಷೆಗೆ ಪಂಚಾಯತ್ ನಲ್ಲಿ 2000 ರೂಪಾಯಿಗೆ ಆಗುತ್ತಿದ್ದ ಕೆಲಸ ಇದೀಗ ಕಾಪು ಪ್ರಾಧಿಕಾರಕ್ಕೆ ಹೋಗಿ 20,000 ಖರ್ಚು ಮಾಡುವ ಹಾಗೆ ಆಗಿದೆ. ಮನೆ ಕಟ್ಟುವವರು ಹತ್ತಾರು ಬಾರಿ ಕಾಪು ಪ್ರಾಧಿಕಾರಕ್ಕ ಅಲೆದಾಡುವ ಪರಿಸ್ಥಿತಿ ಬಂದರೂ ಪರವಾನಿಗೆ ಸಿಗುತ್ತಿಲ್ಲ. ಇದರಿಂದ ಜನರಿಗಾಗುವ ಸಮಸ್ಯೆಗಳ ಕುರಿತು ದಿನಪತ್ರಿಕೆಗಳು ಸಮಗ್ರವಾಗಿ ವರದಿ ಮಾಡಿವೆ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷರಾದ ಬಿ.ಮಣಿರಾಜ ಶೆಟ್ಟಿ ಹೇಳಿದರು.
ಬೈಲೂರು ಮಹಿಷ ಮರ್ದಿನಿ ಸಭಾಭವನದಲ್ಲಿ ನಡೆದ ಬೈಲೂರು ಮಹಾಶಕ್ತಿ ಕೇಂದ್ರದ ಭೂತ್ ಅಧ್ಯಕ್ಷರು-ಜನಪ್ರತಿನಿಧಿಗಳು ಮತ್ತು ಪಕ್ಷದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡುತ್ತಾ, ಕಾಂಗ್ರೆಸ್ ಆಡಳಿತದಲ್ಲಿ ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಿಗೆ ತೀರಾ ತೊಂದರೆಯಾಗುತ್ತಿದ್ದು ಅಭಿವೃದ್ಧಿ ಶೂನ್ಯವಾಗಿದೆ. ಹಿಂದೆ ಬಿಜೆಪಿ ಸರ್ಕಾರ ಇರುವಾಗ ಲೆಕ್ಕವಿಲ್ಲದಷ್ಟು ರಸ್ತೆಗಳು, ಸೇತುವೆಗಳು ಮಂಜೂರಾಗಿದ್ದು ಈ ಬಾರಿ ಕನಿಷ್ಠ ತೀರಾ ಅಗತ್ಯದ ಕೆಲಸಗಳಿಗೂ ಅನುದಾನ ದೊರೆಯುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್‌ನ ಕೆಲವು ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರಕಾರವು ಅಧಿಕಾರಿಗಳ ಜನರನ್ನು ಸುಲಿಗೆ ಮಾಡುತ್ತಿದೆ. ಇದೊಂದು ಪಿಕ್‌ಪಾಕೆಟ್ ಸರಕಾರ ಎಂಬುದಾಗಿ ಸಾಬೀತಾಗಿದೆ ಎಂದು ಕಾಂಗ್ರೆಸ್ ಸರಕಾರವನ್ನು ಟೀಕಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್, ಕ್ಷೇತ್ರ ಅದ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷರಾದ ಮಹಾವೀರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾದ ಬೋಳ ಸತೀಶ್ ಪೂಜಾರಿ, ಶಕ್ತಿಕೇಂದ್ರ ಅಧ್ಯಕ್ಷರಾದ ಸಂದೀಪ್ ಅಮೀನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.