ಮಂಗಳೂರು, ಮಾರ್ಚ್ 28: ರಮೇಶ್ ಜಾರಕಿಹೊಳಿ ಪರ ಸಿಐಟಿ ಕೆಲಸ ಮಾಡುತ್ತಿದೆ. ಸಂತ್ರಸ್ಥೆ ಕುಟುಂಬದವರ ಪತ್ರಿಕಾಗೋಷ್ಠಿ ಸಿಟ್ ಪ್ರಾಯೋಜಿತ ಎಂದು ಕಾಂಗ್ರೆಸ್ ನಾಯಕ ಮಿಥುನ್ ರೈ ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
ಸಂತ್ರಸ್ತೆ ಸ್ಪಷ್ಟವಾಗಿ ತನ್ನ ಮನೆಯವರಿಗೆ ಜೀವ ಬೆದರಿಕೆ ಇರುವುದಾಗಿ ಹೇಳಿದ್ದಾಳೆ. ರಮೇಶ್ ಜಾರಕಿಹೊಳಿಯ ಬಾನಗಡಿಯ ಈ ಪ್ರಕರಣದಲ್ಲಿ ಸಂತ್ರಸ್ತೆಯ ಹೊರತು ಇತರರ ಹೇಳಿಕೆಗೆ ಮಹತ್ವ ಇಲ್ಲ. ಮನೆಯವರಿಗೆ ವಿಷಯ ಗೊತ್ತಿದ್ದರೆ ಆಗಲೇ ಬಂದು ಹೇಳಬೇಕಾಗಿತ್ತು. ಎರಡು ವಾರಗಳ ಬಳಿಕ ಸಿಐಟಿ ಕರೆಯ ಬಂದು ಅವರು ಹೇಳಿದ್ದನ್ನು ಹೇಳಿದ್ದಾರೆ. ಒಬ್ಬರು ಟೂ ಸ್ಟಾರ್ ಪೋಲೀಸ್ ನಿರ್ದೇಶನದಲ್ಲಿ ಒತ್ತಾಯದ ಪತ್ರಿಕಾಗೋಷ್ಠಿ ನಡೆದಿರುವುದಾಗಿ ರೈ ಹೇಳಿದರು.
ಈ ಹೇಳಿಕೊಟ್ಟು ನಡೆಸಿದ ಪತ್ರಿಕಾಗೋಷ್ಠಿಯ ಬೆನ್ನಿಗೆ ರಮೇಶ್ ಜಾರಕಿಹೊಳಿ ಪೂರ್ವನಿರ್ಧರಿತ ಪತ್ರಿಕಾಗೋಷ್ಠಿ ನಡೆಸಿ ನಮ್ಮ ಅಧ್ಯಕ್ಷರ ವಿರುದ್ಧ ಕೆಟ್ಟ ಭಾಷೆ ಬಳಸಿದ್ದಾರೆ. ಈ ರಜಾ ಯೋಗ್ಯತೆಗೆ ಈ ಪತ್ರಿಕಾಗೋಷ್ಠಿ ಇತ್ತು. ಸಿಟ್ ಮತ್ತು ಪೋಲೀಸರು ಜಾರಕಿಹೊಳಿ ಕರ್ಮಕಾಂಡದ ವ್ಯವಹಾರ ತಿರುಚುತ್ತಿದ್ದಾರೆ. ರಮೇಶ್ ಸಾಕ್ಷ್ಯ ನಾಶಕ್ಕೆ ಪ್ರಯತ್ನ ನಡೆಸಿದ್ದಾರೆ. ಉಪ ಚುನಾವಣೆಗಳ ಸಂದರ್ಭದಲ್ಲಿ ಜನರ ಗಮನ ಬೇರೆಡೆಗೆ ಸೆಳೆಯಲು ಈ ತಿರುಚುವ ಸುದ್ದಿಗಳು ಬರುತ್ತಿವೆ ಎಂದು ಅವರು ಹೇಳಿದರು.
ಕೂಡಲೆ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಬೇಕು. ಅಲ್ಲಿಯವರೆಗೆ ಬೆಂಗಳೂರಿನ ಸಿಟ್ ಕಚೇರಿಯ ಎದುರು ನಾನು ಪ್ರತಿಭಟನೆ ನಡೆಸುವುದಾಗಿ ಮಿಥುನ್ ರೈ ಹೇಳಿದರು. ಕಾಂಗ್ರೆಸ್ ಬೆನ್ನಿಗೆ ಇರಿದ ರಮೇಶ್ ಇತಿಹಾಸ ಮೋಸದ್ದಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಂತಹ ಶಾಸಕರ ಅಗತ್ಯ ಇದೆಯೇ? ಬಿಜೆಪಿ ಪಕ್ಷದವರೇ ಈ ಪ್ರಶ್ನೆ ಎತ್ತಿದ್ದಾರೆ. ಕೂಡಲೆ ರಮೇಶ್ ಜಾರಕಿಹೊಳಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅನಿಲ್, ಅಶ್ರಫ್ ಬಜಾಲ್, ಪ್ರಕಾಶ್ ಸಾಲಿಯಾನ್, ಕಿರಣ್, ಮೆರಿಲ್ ರೇಗೋ, ಸಂತೋಷ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.