ವೇಣೂರು: ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ವೇಣೂರು, ಇಲ್ಲಿಯ ವಿದ್ಯಾರ್ಥಿಗಳು ಈ ವರ್ಷದ ದೀಪಾವಳಿಯನ್ನು ಪಟಾಕಿ ರಹಿತವಾಗಿ ಆಚರಿಸಿ ಆ ಹಣವನ್ನು ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ನೀಡಿದ ಅಪರೂಪದ ಕಾರ್ಯ ನಡೆದಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಪ್ರೌಢಶಾಲೆ ಇದಾಗಿದ್ದು, ಪ್ರಸಕ್ತ 594 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 1956 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಈವರೆಗೆ ಹಳೆಯ ಕಟ್ಟಡದಲ್ಲಿಯೇ ನಡೆಯುತ್ತಿದ್ದು, ಸರ್ಕಾರದ ವತಿಯಿಂದ ರೂಪಾಯಿ 1. 25 ಕೋಟಿ ವೆಚ್ಚದ 8 ಶಾಲಾ ಕೊಠಡಿಗಳು ನಿರ್ಮಾಣಗೊಂಡು, ಉದ್ಘಾಟನೆಗೆ ಸಿದ್ಧಗೊಂಡು ಸ್ಥಳಾಂತರಗೊಳ್ಳುವ ಹಂತದಲ್ಲಿದೆ. ಆದರೆ ಅಲ್ಲಿ ಶೌಚಾಲಯ ,ಕುಡಿಯುವ ನೀರು ಮುಂತಾದ ಯಾವುದೇ ಮೂಲಭೂತ ಸೌಕರ್ಯಗಳಿರುವುದಿಲ್ಲ. ಊರವರು, ಹಿರಿಯ ವಿದ್ಯಾರ್ಥಿಗಳು ,ದಾನಿಗಳು ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿದ್ದು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕೂಡ ಇದಕ್ಕೆ ಕೈಜೋಡಿಸಿ ಇತರರಿಗೆ ಪ್ರೇರಣೆಯಾಗಿದ್ದಾರೆ.
ಶಾಲಾ ಉಪಪ್ರಾಂಶುಪಾಲರ ಹಾಗೂ ಶಿಕ್ಷಕರ ಸಲಹೆಯಂತೆ ಈ ವರ್ಷದ ದೀಪಾವಳಿಯನ್ನು ಪಟಾಕಿ ರಹಿತವಾಗಿ ಆಚರಿಸಿ ಅದಕ್ಕಾಗಿ ಖರ್ಚು ಮಾಡುವ ಹಣವನ್ನು ಶೌಚಾಲಯ ನಿರ್ಮಾಣಕ್ಕೆ ಬಳಸಬಹುದೆಂದು ಆ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟುವ ಹಾಗೂ ಮಕ್ಕಳಲ್ಲಿ ಉಳಿತಾಯ ಭಾವನೆ ಬೆಳೆಸಬಹುದೆಂದು ಮನವರಿಕೆ ಮಾಡಲಾಯಿತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಪಟಾಕಿಗಾಗಿ ಖರ್ಚು ಮಾಡುವ ಹಣವನ್ನು ಶಾಲಾ ಶೌಚಾಲಯ ಮತ್ತು ಕುಡಿಯುವ ನೀರಿಗಾಗಿ ನೀಡಲು ಒಪ್ಪಿ ಒಟ್ಟು ಮೊತ್ತ 34,061/ ರೂಪಾಯಿಯನ್ನು ಸಂಗ್ರಹಿಸಿ, ಶಾಲಾ ನಾಯಕ, ಉಪನಾಯಕ, ವಿದ್ಯಾರ್ಥಿ ಮಿತ್ರರು,ಉಪಪ್ರಾಂಶುಪಾಲರಿಗೆ ಹಾಗೂ ಶಿಕ್ಷಕರಿಗೆ ಹಸ್ತಾಂತರಿಸಿ ಇತರರಿಗೆ ಮಾದರಿಯಾಗಿದ್ದಾರೆ.