ಬೆಳ್ತಂಗಡಿ:  18ನೇ ಯ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ತಯಾರಿ ಸಭೆಯು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಡಿ. ಯದುಪತಿ ಗೌಡರ ಅಧ್ಯಕ್ಷತೆಯಲ್ಲಿ ವಾಣಿ ಕಾಲೇಜಿನಲ್ಲಿ ಜರಗಿತು. 

ಸಭೆಯ ತೀರ್ಮಾನದಂತೆ ದಶಂಬರ 17 ಆದಿತ್ಯವಾರದಂದು ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಮ್ಮೇಳನ ಜರಗಲಿದೆ. ಸುವರ್ಣ ಕರ್ನಾಟಕ ವರ್ಷವಾದದ್ದರಿಂದ ಸಮಗ್ರ ಸಮ್ಮೇಳನವು ಸುವರ್ಣ ಕರ್ನಾಟಕದ ಆಶಯವನ್ನು ಬಿಂಬಿಸುವಂತೆ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಅಭಿಪ್ರಾಯ ಪಡೆಯಲಾಯಿತು. ಅದರಂತೆ ಸುವರ್ಣ ಕರ್ನಾಟಕ: ಸಾಹಿತ್ಯ  ಭಾಷೆ ಸಂಸ್ಕೃತಿಯ ಕುರಿತಾದ ಸಂವಾದ ಗೋಷ್ಠಿ, ಜ್ಞಾನಪೀಠ ಪುರಸ್ಕೃತರ ನೆನಪು, ಯುವ ಕವಿಗೋಷ್ಠಿ, ಸನ್ಮಾನ ಕಾರ್ಯಕ್ರಮಗಳ ಜೊತೆಗೆ ಯಕ್ಷಗಾನ ಗಾಯನ ವೈವಿಧ್ಯ, ಕನ್ನಡ ಗೀತೆಗಳ ಗಾಯನ, ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸಮ್ಮೇಳನದೊಂದಿಗೆ ಅಳವಡಿಸಲಾಗುವುದೆಂದು ಅಭಿಪ್ರಾಯ ಪಡಲಾಯಿತು. ಜೊತೆಗೆ ಉದ್ಘಾಟನೆ, ಚಾರುಮುಡಿ ಸಂಚಿಕೆ ಬಿಡುಗಡೆ, ಸನ್ಮಾನ ಮತ್ತು ಸಮಾರೋಪಗಳೊಂದಿಗೆ ಸಮ್ಮೇಳನವನ್ನು ಸರಳವಾಗಿ, ಅರ್ಥಪೂರ್ಣವಾಗಿ ಸಂಘಟಿಸುವ ಬಗ್ಗೆ ಚರ್ಚಿಸಲಾಯಿತು.   

ಈ ಸಂಬಂಧವಾಗಿ ಸಮ್ಮೇಳನದ ಸಂಯೋಜನಾ ಸಮಿತಿಯ ಮತ್ತು ವಿವಿಧ ಉಪ ಸಮಿತಿಗಳ ರಚನೆಗಾಗಿ ಬೆಳ್ತಂಗಡಿಯ ಸಂಘಸಂಸ್ಥೆಗಳ, ಪ್ರಮುಖರ ಸಭೆಯನ್ನು ಶೀಘ್ರದಲ್ಲೆ ಕರೆದು ಸಮಿತಿಯನ್ನು ಅಂತಿಮಗೊಳಿಸಲಾಗುವುದೆಂದು ಅಧ್ಯಕ್ಷರಾದ ಯದುಪತಿ ಗೌಡರು ತಿಳಿಸಿದರು. 

ಸಭೆಯನ್ನು ಉದ್ದೇಶಿಸಿ ನಿವೃತ್ತ ಪ್ರಾಚಾರ್ಯರಾದ ಗಣಪತಿ ಭಟ್ ಕುಳಮರ್ವರವರು ಮಾತನಾಡುತ್ತಾ ; ಸಾಹಿತ್ಯ ಸಂಸ್ಕೃತಿ, ಭಾಷೆ ಶಿಕ್ಷಣ ಇವೆಲ್ಲ ಬದುಕಿನಲ್ಲಿ ಜೊತೆಯಾಗಿರುವ ವಿಷಯಗಳು. ಈ ಹಿನ್ನೆಲೆಯಲ್ಲಿ ಆಯೋಜನೆಗೊಳ್ಳುವ ತಾಲೂಕಿನ 18ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ತೇರನೆಳೆಯೋಣ ಬನ್ನಿ, ಸಣ್ಣ ಪುಟ್ಟ ಲೋಪಗಳನ್ನು ಮೀರಿ ಸಮ್ಮೇಳನವನ್ನು ಎಲ್ಲರೂ ಜೊತೆ ಸೇರಿ ಯಶಸ್ವಿಗೊಳಿಸೋಣವೆಂದು ಕರೆ ನೀಡಿದರು. 

ಸಭೆಯಲ್ಲಿ ಏ. ಕೃಷ್ಣಪ್ಪ ಪೂಜಾರಿ ಬೆಳ್ತಂಗಡಿ, ಲಕ್ಷ್ಮೀನಾರಾಯಣ ಕೆ., ಶೀಲಾ ಎಸ್ ಹೆಗ್ಡೆ ವೇಣೂರು, ಬಿ ಲಕ್ಷ್ಮಣ ಪೂಜಾರಿ, ವಸಂತ ಶೆಟ್ಟಿ ಮಡಂತ್ಯಾರು, ಮೀನಾಕ್ಷಿ ಗುರುವಾಯನಕೆರೆ, ವಸಂತಿ ಟಿ ನಿಡ್ಲೆ, ಗಂಗಾರಾಣಿ ಜೋಷಿ ಲ್ಯಾಲ, ಬೆಳ್ಳಿಯಪ್ಪ ಬೆಳಾಲು, ಮುಕುಂದ ಚಂದ್ರ ಪೆರಿಂಜೆ, ರಮೇಶ್ ಪೈಲಾರು, ಅಶ್ರಫ್ ಆಲಿ ಕುಂಞಿ ಮುಂಡಾಜೆ, ಲಾವಣ್ಯ ವಸಂತ್ ಬೆಳ್ತಂಗಡಿ ಮೊದಲಾದವರು ಪಾಲ್ಗೊಂಡಿದ್ದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ರಾಮಕೃಷ್ಣ ಭಟ್ ಬೆಳಾಲು ಸ್ವಾಗತಿಸಿ, ಪ್ರಮೀಳಾ ಬೆಳ್ತಂಗಡಿಯವರು ವಂದಿಸಿದರು.