ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್ ಇದರ ವಾರ್ಷಿಕ ಮಹೋತ್ಸವವು (ಸಾಂತ್‍ಮಾರಿ) ಇದೇ ಬರುವ ಡಿಸೆಂಬರ್ 06ನೇ ಬುಧವಾರ ನಡೆಯಲಿದೆ. ಈ ಪಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮುಖ್ಯವಾಗಿ ಡಿಸೆಂಬರ್ 03ನೇ ಆದಿತ್ಯವಾರ ಬೆಳಗ್ಗೆ 8ರಿಂದ ಸಹೋದರತೆಯ ಪ್ರತೀಕವಾಗಿ ದಿವ್ಯ ಬಲಿಪೂಜೆ ನಡೆಯುಲಿದ್ದು ಸಂತ ಅಂತೋನಿ ಕಾಲೇಜು, ನಾರಾವಿ ಇದರ ಪ್ರಾಂಶುಪಾಲರಾದ ವಂ. ಸ್ವಾಮಿ ಆಲ್ವಿನ್ ಸೆರಾವೊ ರವರು ಅಂದಿನ ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಲಿದ್ದಾರೆ. ಅಂದು ಪ್ರಭು ಏಸು ಕ್ರಿಸ್ತರ ಮಹಿಮೆಯ ಸಂಸ್ಕಾರದ ಪರಮ ಪವಿತ್ರ ಪ್ರಸಾದವನ್ನು ಭವ್ಯ ಮೆರವಣಿಗೆಯ ಮೂಲಕ ಬಹಿರಂಗವಾಗಿ ಆರಾಧನೆ ಮಾಡಲಾಗುವುದು. ಡಿಸೆಂಬರ್ 05ನೇ ಮಂಗಳವಾರ ಸಂಜೆ 6 ರಿಂದ ದೇವರ ವಚನಗಳ ಹಾಗೂ ಕೀರ್ತನೆಗಳ ಸಂಭ್ರಮ,ಅಸ್ವಸ್ಥರಿಗೆ ವಿಶೇಷ ಪ್ರಾರ್ಥನೆ (ಕೊಂಪ್ರಿಚೊ ಅಯ್ತಾರ್) ನಡೆಯಲಿದೆ. ಮಡಂತ್ಯಾರು ಪೇಟೆಯ ವೆಲಂಕನಿ ಮಾತೆಯ ಆವರಣದಲ್ಲಿ ಮಡಂತ್ಯಾರಿನ ಆಶಾದೀಪ ಗುರುಕುಲದ ಸುಪೀರಿಯರ್ ವಂ. ಸ್ವಾಮಿ ಜೆರಾಲ್ಡ್ ಡಿ’ಸೋಜರವರಿಂದ ದೇವರ ವಾಕ್ಯದ ಸಂದೇಶ ಹಾಗೂ ಪ್ರಭುಯೇಸು ಕ್ರಿಸ್ತರ ಪವಿತ್ರ ಹೃದಯದ ಪವಾಡ ಪ್ರತಿಮೆಯನ್ನು ಇಗರ್ಜಿಗೆ ಮೊಂಬತ್ತಿ ಮೆರವಣಿಗೆ ಮೂಲಕ ಭಕ್ತಿಪೂರ್ವಕವಾಗಿ ತರುವ ಮೂಲಕ ಸಕಲ ಜನತೆಗೆ ಶಾಂತಿ, ಸಾಮರಸ್ಯ, ನೆಮ್ಮದಿ, ಆರೋಗ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸುವ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಅಂದಿನ ವಿಶೇಷ ಪೂಜಾ ಪ್ರಾರ್ಥನೆಯ ವಿಧಿವಿಧಾನ (ಬೆಸ್ಪ್) ನೆರವೇರಿಸಲಾಗುವುದು.
ಡಿಸೆಂಬರ್ 06 ರಂದು ಬುಧವಾರ ವಾರ್ಷಿಕ ಮಹೋತ್ಸವದ ಸಂಭ್ರಮ ನಡೆಯಲಿದ್ದು, ಈ ದಿನದ ಪೂಜಾ ವಿಧಿವಿಧಾನವನ್ನು ವರ್ಕಾಡಿ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ವಂ.ಸ್ವಾಮಿ ಬೇಸಿಲ್‍ವಾಸ್ ರವರು ನೆರವೇರಿಸಲಿದ್ದಾರೆ. ವಿವಿಧ ಇಗರ್ಜಿಗಳ ಸುಮಾರು 60ಕ್ಕೂ ಮಿಕ್ಕಿದ ಧರ್ಮಗುರುಗಳು ಈ ದಿವ್ಯ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಅಂದು ಸಾರ್ವಜನಿಕರಿಗೆ ಇಗರ್ಜಿಯ ಮುಂಭಾಗದಲ್ಲಿ ಏಸುಕ್ರಿಸ್ತರ ಪವಾಡ ಪ್ರತಿಮೆಯ ಮುಂಭಾಗದಲ್ಲಿ ವಿಶೇಷ ಮೊಂಬತ್ತಿ ಸೇವೆ ಮತ್ತು ಪವಿತ್ರ ಹೂ ಪ್ರಸಾದದ ವಿತರಣೆಯ ವ್ಯವಸ್ಥೆಕಲ್ಪಿಸಲಾಗಿದೆ.
ಈ ಎಲ್ಲಾ ವಿಧಿ ವಿಧಾನ, ಸಂಭ್ರಮಗಳಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ ಯೇಸು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಇಗರ್ಜಿಯ ಮುಖ್ಯ ಧರ್ಮಗುರುಗಳಾದ ವಂ. ಸ್ವಾಮಿ ಡಾ| ಸ್ಟಾನಿ ಗೋವಿಯಸ್, ಸಹಾಯಕ ಧರ್ಮಗುರುಗಳಾದ ವಂ. ಸ್ವಾಮಿ ವಿಲಿಯಂ ಡಿ’ಸೋಜಾ, ಪ್ರಾಂಶುಪಾಲರಾದ ವಂ. ಸ್ವಾಮಿ ಜೆರೋಮ್ ಡಿ’ಸೋಜಾ, ಮತ್ತು ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂ. ಸ್ವಾಮಿ ದೀಪಕ್ ಡೇಸಾ, ಉಪಾಧ್ಯಕ್ಷರಾದ ಜೆರಾಲ್ಡ್ ಮೊರಾಸ್, ಕಾರ್ಯದರ್ಶಿಯಾದ ನೆಲ್ಸನ್ ಲಸ್ರಾದೊ, ಸಂಯೋಜಕರಾದ ರಿಚಾರ್ಡ್ ಮೊರಾಸ್, ಪ್ರಚಾರ ಸಮಿತಿಯ ಸಂಯೋಜಕರಾದ ವಿನ್ಸೆಂಟ್ ಮೊರಾಸ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.