ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2025–26ನೇ ಸಾಲಿನ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವು ಕಾರ್ಕಳ ತಾಲೂಕಿನ ಕಲತ್ರಪಾದೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಅಶೋಕ್ ಪೂಜಾರಿ, ಈ ವಿಶೇಷ ಶಿಬಿರವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಾಮಾಜಿಕ ಹೊಣೆಗಾರಿಕೆ ಹಾಗೂ ಸಕಾರಾತ್ಮಕ ಬದಲಾವಣೆಯನ್ನು ತರಲಿ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ನಿರಂಜನ್ ಮಾತನಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಸಾಂಸ್ಕøತಿಕವಾಗಿ ಹಾಗೂ ಶೈಕ್ಷಣಿಕವಾಗಿ ಶ್ರೇಷ್ಠ ಸಾಧನೆ ತೋರಿದೆ. ಈ ಸಂಸ್ಥೆಯ ಮಕ್ಕಳು ನಮ್ಮ ಶಾಲೆಯಲ್ಲಿ ಶಿಬಿರ ನಡೆಸುತ್ತಿರುವುದು ನಮಗೆ ಹರ್ಷ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್, ಈ ವರ್ಷದ ವಿಶೇಷ ಶಿಬಿರವು ನಶಾ ಮುಕ್ತ ಭಾರತ ಎಂಬ ಘೋಷವಾಕ್ಯದೊಂದಿಗೆ ನಡೆಯಲಿದೆ. ಈ ಘೋಷವಾಕ್ಯ ಕೇವಲ ಪೋಷಣೆಗೆ ಮಾತ್ರ ಸೀಮಿತವಲ್ಲ, ಅದರ ಮಹತ್ವವನ್ನು ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. ನಶಾಮುಕ್ತ ಭಾರತದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಪತ್ರಕರ್ತ ಕೆವಿನ್ ಮೆಂಡೋನ್ಸ, ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರೀತಿಕುಮಾರ್, ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಮತ್ತಿತರರು ಶುಭ ಹಾರೈಸಿ ಮಾತನಾಡಿದರು.
ವೇದಿಕೆಯಲ್ಲಿ ನಲ್ಲೂರು ಗ್ರಾಮ ಪಂಚಾಯತ್ ಸದಸ್ಯರಾದ ಕುಸುಮ ಮತ್ತು ಸುಮಿತ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೇಶ್ ಪೂಜಾರಿ, ಆಳ್ವಾಸ್ ಕಾಲೇಜಿನ ಉಪ ಪ್ರಾಂಶುಪಾಲೆ ಜಾನ್ಸಿ ಪಿ.ಎನ್., ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಶ್ ಚಿಪಳೂಣಕರ ಉಪಸ್ಥಿತರಿದ್ದರು.
ಶಿಬಿರಾಧಿಕಾರಿ ಮೇಘನಾ ಸ್ವಾಗತಿಸಿ, ಸ್ವಾತಿ ವಂದಿಸಿ, ಪ್ರಭಾತ್ ನಿರೂಪಿಸಿದರು.