ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ಬಂಟರ ಸಂಘ, ಮಹಿಳಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಮೂರನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮ ವಿದ್ಯಾ ಗಿರಿಯ ಆಳ್ವಾಸ್ ಕ್ಯಾಂಪಸ್‌ನ ಕೃಷಿ ಸೀರಿ ವೇದಿಕೆಯಲ್ಲಿ ಆಗಸ್ಟ್ ಮೂರರಂದು ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿ, ಅಡಕೆ ಹೂವನ್ನು ಅರಳಿಸಿ ಉದ್ಘಾಟಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಮಾತನಾಡಿ ಬಂಟರ ಭವನದ ಸ್ವಂತ ಕಟ್ಟಡದ ಕನಸು ಆದಷ್ಟು ಶೀಘ್ರದಲ್ಲಿ ನನಸಾಗಲಿ. ಮಕ್ಕಳಿಗೆ ವಿದ್ಯೆ ಇಂದಿನ ಕಾಲದಲ್ಲಿ ಅತಿ ಅಗತ್ಯವಾಗಿದೆ. ಮನೆಯ ಹೆಂಗಸರು ಮಕ್ಕಳನ್ನು ಭಾಷೆ, ಸಂಸ್ಕೃತಿಗಳಲ್ಲಿ ಉತ್ತಮ ರೀತಿಯಲ್ಲಿ ಬೆಳೆಸಿ ಹೃದಯವಂತರನ್ನಾಗಿ ಮಾಡಬೇಕಾಗಿದೆ ಎಂದು ಕರೆಕೊಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಿಥುನ್ ರೈ ಮಾತನಾಡಿ ಹೃದಯ ಶ್ರೀಮಂತಿಕೆಯ ಕಾರಣ, ಬಂಟ ಸಮುದಾಯವು ಗೌರವವನ್ನು ಪಡೆಯಲು ಸಾಧ್ಯವಾಗಿದೆ. ಅದನ್ನು ಉಳಿಸಿಕೊಳ್ಳುವುದರೊಂದಿಗೆ ಸಾಮಾಜಿಕ ಕಳಕಳಿ, ಬಡವರ ಬಗ್ಗೆ ಆಧಾರವನ್ನು ಕೂಡ ತೋರ್ಪಡಿಸಬೇಕಾಗಿದೆ ಎಂದು ಆಶಿಸಿದರು. ಸರಕಾರಿ ಹುದ್ದೆಗಳನ್ನು ಪಡೆದು ಸೂಜಿಯಂತೆ ಎಲ್ಲ ಬಂಟರನ್ನು ಒಗ್ಗೂಡಿಸಲು ಪ್ರಯತ್ನಿಸಬೇಕೆಂದು ಕರೆಕೊಟ್ಟರು.
ಕಂಬಳ ಕ್ಷೇತ್ರದ ಪ್ರಧಾನ ತೀರ್ಪುಗಾರ, ಚಲನಚಿತ್ರ ನಟ ರಾಜೀವ್ ಶೆಟ್ಟಿ ಎಡ್ತೂರು ಆಶಾಢದ ನುಡಿಯಲ್ಲಿ ಹಿಂದಿನ ಕಾಲದ ಬೇರು ಗಿಡಗಳು ಇಂದು ದೊರಕುತ್ತಿಲ್ಲದಿದ್ದರೂ ಕೂಡ ಅಂದಿನ ದಿನಗಳನ್ನು ನೆನಪಿಸಿಕೊಂಡು ಉತ್ತಮ ರೀತಿಯಲ್ಲಿ ಆಲೋಚನೆಗಳನ್ನು ಬದಲಾಯಿಸುವ ಮೂಲಕವಾಗಿ ಮನೆಯ ಬಂಗಾರದ ಮಗಳನ್ನು ಮೊಬೈಲ್ನ ಕವರ್ ಮತ್ತು ಸ್ಕ್ರೀನ್ ಗಾರ್ಡಿನಂತೆ ಸಂರಕ್ಷಿಸ ಬೇಕಾಗಿದೆ ಎಂದು ತಿಳಿಯಪಡಿಸಿದರು.
ವೈದ್ಯಕೀಯ ಓಟಿ ನರ್ಸ್ ಲಕ್ಷ್ಮಿ ಶೆಟ್ಟಿ, ಯೋಗಸಾಧಕಿ ಪ್ರಫುಲ್ಲಾ ಶೆಟ್ಟಿ, ಕೃಷಿ ಹೈನುಗಾರಿಕೆ ಸಾಧಕಿ ಬಂಗೇರಬೆಟ್ಟು ಯಶೋಧ ಶೆಟ್ಟಿ ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ, ಬಂಟರ ಸಂಘದ ಅಧ್ಯಕ್ಷ ತಿಮ್ಮಯ್ಯ ಶೆಟ್ಟಿ, ವಸಂತ ಶೆಟ್ಟಿ ಕೇದಿಗೆ, ಸಂತೋಷ್ ಶೆಟ್ಟಿ, ವಸಂತ್ ಶೆಟ್ಟಿ ಶ್ರದ್ಧಾ, ಲೋಕೇಶ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್ ಹೆಗ್ಡೆ, ಹಾಜರಿದ್ದರು.
ಛದ್ಮವೇಷ, ರಂಗೋಲಿ ಮತ್ತು ಅಡುಗೆ ಸ್ಪರ್ಧೆಯನ್ನು ಬಂಟರ ಸಂಘದ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮಿ, ಹಾಜರಿದ್ದರು.
ಇದೇ ಸಂದರ್ಭದಲ್ಲಿ ಪದವಿ ಪೂರ್ವ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅನಾರೋಗ್ಯ ಪೀಡಿತ ಹಲವು ಜನರಿಗೆ ಧನ ಸಹಾಯವನ್ನು ವಿತರಿಸಲಾಯಿತು.
ಕೋಶಾಧಿಕಾರಿ ಗೀತಾ ಪಿ ಶೆಟ್ಟಿ ಸ್ವಾಗತಿಸಿದರು. ಶಿವಪ್ರಸಾದ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸೌಮ್ಯ ಎಸ್ ಶೆಟ್ಟಿ ವಂದಿಸಿದರು.