ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆಯ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ 109 ನೇ ವರ್ಷದ ಪ್ರಗತಿ ವರದಿ ಬಿಡುಗಡೆಯಾಗಿರುತ್ತದೆ. ಆ ಪ್ರಕಾರ ಹಿಂದಿನ ವರ್ಷಕ್ಕಿಂತ 1.32 ಲಕ್ಷ ಪಾಲು ಬಂಡವಾಳ ವೃದ್ಧಿ ಆಗಿರುತ್ತದೆ. ವಿವಿಧ ನಿಧಿಗಳಲ್ಲಿ 77.05 ಕೋಟಿ ಸಂಗ್ರಹವಾಗಿದೆ. 530.69 ಕೋಟಿ ಠೇವಣಿ ಸಂಗ್ರಹವಾಗಿದ್ದು, 94 ಶೇಕಡ ಸಾಲ ವಸೂಲಾತಿ ಆಗಿರುತ್ತದೆ. 

ಸರಕಾರದ ಸೂಚನೆಯಂತೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಉದ್ದೇಶದ ಸಾಲಗಳನ್ನು ವಿತರಿಸಲಾಗುತ್ತಿದೆ. ಪ್ರಸ್ತುತ ವರ್ಷ ಒಟ್ಟು 10.42 ಕೋಟಿ ನಿವ್ವಳ ಲಾಭ ಪಡೆದಿರುತ್ತದೆ. ಇದರಿಂದಾಗಿ ಸೊಸೈಟಿ "ಎ" ದರ್ಜೆಯನ್ನು ಗಳಿಸಿದೆ ಎಂದಿದೆ.

ಒಟ್ಟು 26 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಸೊಸೈಟಿಯ ಪ್ರಗತಿಗೆ ಪೂರಕವಾಗಿ ಅಹರ್ನಿಶಿ ದುಡಿಯುತ್ತಿದ್ದಾರೆ. ವಿಶೇಷ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಚಂದ್ರಶೇಖರ ಎಂ, ಮುಖ್ಯ ಕಾರ್ಯನಿರ್ವಾಹಕರಾಗಿ ಕೆ. ರಘುವೀರ ಕಾಮತ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸದಸ್ಯರು ಕೇವಲ ಒಂದು ಬಾರಿ ರೂ. ಒಂದು ಸಾವಿರ ಪಾವತಿಸಿ ಕಲ್ಪವೃಕ್ಷ ಆರೋಗ್ಯ ವಿಮಾ ಯೋಜನೆಯ ಕಾರ್ಡ್ ಪಡೆದು ವಿಶೇಷ ರಿಯಾಯಿತಿ ಹೊಂದಬಹುದಾಗಿದೆ. ಡಯಾಲಿಸಿಸ್ ಸೌಲಭ್ಯ, ಚಿಕಿತ್ಸೆಗಳಿಗೆ ನೆರವು, ಕೃಷಿ ಖುಷಿ, ಮಳೆ ಕೊಯ್ಲು, ರೈತರಿಗೆ ಪಿಂಚಣಿ, ಸೋಲಾರ್ ರಿಯಾಯಿತಿ, ಇತ್ಯಾದಿ ಹಲವಾರು ಸೌಲಭ್ಯಗಳನ್ನು ಎಲ್ಲಾ ಸದಸ್ಯರಿಗೆ ಹಾಗೂ ಬ್ಯಾಂಕಿನ ನೌಕರರಿಗೆ ನೀಡಿರುತ್ತದೆ. 

ಹಲವಾರು ಅಭಿವೃದ್ಧಿಯ ಕಾರ್ಯಗಳಿಂದಾಗಿ ಸೊಸೈಟಿ ಕರ್ನಾಟಕ ರಾಜ್ಯದ ಸಹಕಾರ ಮಾಣಿಕ್ಯ ಪ್ರಶಸ್ತಿಯನ್ನು 2024ರಲ್ಲಿ ಗಳಿಸಿರುತ್ತದೆ. ಹಲವಾರು ಯೋಜನೆಗಳನ್ನು ಸದೃಢಗೊಳಿಸಲು ಪ್ರಯತ್ನಿಸುವ ಕಾರ್ಯ ಮುಂದುವರಿಯುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿರುತ್ತದೆ. 

ಅಗಸ್ಟ್ 3 ರಂದು ಮೂಡುಬಿದಿರೆ ಸ್ವರಾಜ್ಯ ಮೈದಾನದ ಬಳಿಯ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ಸಂಘದ ಅಧ್ಯಕ್ಷ ಸಹಕಾರ ರತ್ನ ಎಂ ಬಾಹುಬಲಿ ಪ್ರಸಾದ್ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ಜರುಗಲಿದೆ.