ಮೂಡುಬಿದಿರೆ: ಫಾರ್ಮಾಸಿಸ್ಟ್‍ಗಳು ಸಮಾಜದ ಆರೋಗ್ಯದ ರಕ್ಷಕರು ಹಾಗೂ ವೈದ್ಯಕೀಯ ವ್ಯವಸ್ಥೆಯ ಶ್ರದ್ಧಾವಂತ ಯೋಧರು ಎಂದು ಮಾಹೆ ಮಣಿಪಾಲ ಫಾರ್ಮಸೂಟಿಕಲ್ ಸೈನ್ಸ್‍ಸ್ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀನಿವಾಸ್ ಮುತಾಲಿಕ್ ನುಡಿದರು.
ಅವರು ಆಳ್ವಾಸ್ ಫಾರ್ಮಾಸಿ ಕಾಲೇಜಿನ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವದಲ್ಲಿ ಔಷಧೋದ್ಯಮ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಔಷಧ ತಯಾರಿಕೆ, ಗುಣಮಟ್ಟದ ಪರಿಶೀಲನೆ, ಸಂಶೋಧನೆ, ಲಸಿಕಾ ಅಭಿವೃದ್ಧಿ ಮತ್ತು ಕ್ಲಿನಿಕಲ್ ರಿಸರ್ಚ್‍ನಲ್ಲಿ ಫಾರ್ಮಾಸಿಸ್ಟ್‍ಗಳ ಬೇಡಿಕೆ ಹೆಚ್ಚುತ್ತಿದೆ. ಇಂದಿನ ಸ್ಪರ್ಧಾತ್ಮಕ ಪರಿಸರದಲ್ಲಿ ದೇಶದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು, ಫಾರ್ಮಾಸಿಸ್ಟ್‍ಗಳು ಅತ್ಯಂತ ಅಗತ್ಯರಾಗಿದ್ದಾರೆ. ಫಾರ್ಮಾಸಿಸ್ಟ್‍ಗಳು ವೈದ್ಯರು ಮತ್ತು ರೋಗಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ಬದ್ಧತೆ, ಶಿಸ್ತು ಮತ್ತು ಸೇವಾ ಮನೋಭಾವ ಈ ವೃತ್ತಿಗೆ ಅವಶ್ಯಕವಾಗಿದ್ದು, ಫಾರ್ಮಸಿ ಶಿಕ್ಷಣವು ಮಾನವ ಸೇವೆಯ ಅತಿ ಶ್ರೇಷ್ಠ ವೃತ್ತಿಯಲ್ಲೊಂದಾಗಿದೆ ಎಂದರು.
ಬೆಂಗಳೂರಿನ ಐ ಡ್ರೀಮ್ಸ್ ಹೆಲ್ತ್‍ಕೇರನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ ಎಸ್ ಕಿರಣ್ ಕುಮಾರ್ ಮಾತನಾಡಿ, ನಮ್ಮೊಳಗಿನ ಶತ್ರುಗಳನ್ನು ನಿಗ್ರಹಿಸಿದರೆ ಯಶಸ್ಸು ಶತಸಿದ್ಧ. ವೈದ್ಯರು ವೈಯಕ್ತಿಕ ಚಿಕಿತ್ಸೆ ನೀಡುವ ಮೂಲಕ ನೂರಾರು ಜನರನ್ನು ತಲುಪಿದರೆ, ಫಾರ್ಮಾಸಿಸ್ಟ್‍ಗಳು ವ್ಯಾಪಕ ಪ್ರಮಾಣದಲ್ಲಿ ಆರೋಗ್ಯ ಸೇವೆಯನ್ನು ನೀಡಿ ಸಾವಿರಾರು ಜನರನ್ನು ತಲುಪುತ್ತಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ, ಕೋರ್ಸಗಳನ್ನು ಆಯ್ಕೆ ಮಾಡುವುದರಿಂದ ಬದುಕು ನಿರ್ಣಯವಾಗುವುದಿಲ್ಲ. ಆಯ್ಕೆ ಮಾಡಿದ ಕ್ಷೇತ್ರದಲ್ಲಿ ನಮ್ಮ ಶ್ರಮ ಹಾಗೂ ಬದ್ಧತೆ ನಮ್ಮ ಏಳಿಗೆಯನ್ನು ನಿರ್ಧರಿಸುತ್ತದೆ. ಆಳ್ವಾಸ್ ಸಂಸ್ಥೆಯ ಬ್ರ್ಯಾಂಡ್ ಮೌಲ್ಯ ಇಲ್ಲಿನ ವಿದ್ಯಾರ್ಥಿಗಳ ಸಾಧನೆ ಮತ್ತು ಬೆಳವಣಿಗೆಯ ಪ್ರತಿಬಿಂಬವಾಗಿದೆ ಎಂದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಆಳ್ವಾಸ್ ಫಾರ್ಮಸಿ ಕಾಲೇಜಿನಲ್ಲಿ ನೂತನವಾಗಿ ಸ್ಥಾಪಿಸಲಾದ ಪ್ರಯೋಗಾಲಯವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ ಆಳ್ವ ಉದ್ಘಾಟಿಸಿದರು. ಆಳ್ವಾಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ ಮಂಜುನಾಥ್ ಸೆಟ್ಟಿ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಹಪ್ರಾಧ್ಯಪಕರಾದ ವಿರನ್ ಕಾರ್ಯಕ್ರಮ ನಿರೂಪಿಸಿ, ಸೂರಜ್ ಅತಿಥಿಗಳನ್ನು ಪರಿಚಯಿಸಿದರು.