ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯ ಕುರಿತು ಆಸಕ್ತಿ ಮೂಡುವಂತೆ ಮಾಡಲು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಫಿಕಾಡ್ ಹೇಳಿದರು.

ಆಳ್ವಾಸ್ ಕಾಲೇಜಿನ (ಸ್ವಾಯತ್ತ) ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಾಲೇಜಿನಲ್ಲಿ ನಡೆದ ‘ಡಿಜಿಟಲ್ ಲೋಕುಡ್ ತುಳು’ ಒಂದು ದಿನದ ಬರವಣಿಗೆ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆದ ವಿದ್ಯಾರ್ಥಿ ಸಮ್ಮೇಳನ, ತುಳು ಐಸಿರ, ಒಂಜಿ ದಿನ ಬಲೆ ಓದುಗ ಕೂಟ, ಮಕ್ಕಳ ರಂಗತರಬೇತಿ ಶಿಬಿರ, ತುಳುನಾಡ ಸಿರಿ ಮದಿಪು, ತುಳುಭಾಷೆ ಬದ್ಕ್ ಗೇನದ ಪೊಲಬು ಮುಂತಾದ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ತುಳುವಿನ ಕುರಿತು ಆಸಕ್ತಿ ಮೂಡಿಸಲು ಸಹಕಾರಿಯಾಗಿವೆ. ತುಳು ಭಾಷೆಯ ಸಮೃದ್ಧತೆಯನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಇನ್ನೂ ಅನೇಕ ಕಾರ್ಯಕ್ರಮಗಳು ನಡೆಯಬೇಕು. ತುಳು ಸಾಹಿತ್ಯ ಓದುವ ಅಭಿರುಚಿಯನ್ನು ಯುವಜನತೆಯಲ್ಲಿ ಬೆಳೆಸಬೇಕಾಗಿದೆ. ತುಳುನಾಡಿನ ತಿಂಡಿತಿನಿಸುಗಳು, ಆಚರಣೆಗಳು, ಆಟಗಳು, ದಸರಾ ವೇಷಗಳು, ಊರಿನ ಹೆಸರುಗಳು ವಿಶೇಷತೆಯಿಂದ ಕೂಡಿವೆ. ಇವುಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತುಳು ಮೌಖಿಕ ಪರಂಪರೆಯಿಂದ ಆರಂಭವಾಗಿ ತಳೆ ಗರಿಯಲ್ಲಿ ಬರೆಯುವ ಕಾಲದಿಂದ ಇದೀಗ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡುವ ಕಾಲಘಟ್ಟಕ್ಕೆ ನಾವು ಬಂದಿದ್ದೇವೆ. ಈ ಪ್ರಕ್ರಿಯೆಯಲ್ಲಿ ಯುವಜನತೆ ಹೆಚ್ಚು ಆಸಕ್ತಿ ತೋರಿಸಬೇಕಿದೆ  ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ತುಳು ಸಾಹಿತ್ಯ ಅಕಾಡೆಮಿ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಹಿರಿ–ಕಿರಿಯರ ಸಹಭಾಗಿತ್ವದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತೋಷದ ವಿಷಯ. ತುಳು ಭಾಷೆಯನ್ನು ಬೆಳೆಸುವುದರೊಂದಿಗೆ ಅದರ ಶ್ರೀಮಂತ ಸಂಸ್ಕೃತಿಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ, ವಿಶೇಷವಾಗಿ ತುಳು ಸಾಹಿತ್ಯದ ಬೆಳವಣಿಗೆಯಲ್ಲಿ ಬಾಸೆಲ್ ಮಿಷನ್‌ನ ಕೊಡುಗೆ ಅನನ್ಯ ಎಂದರು.

ಸಂತ ಅಲೋಶಿಯಸ್ ಪರಿಗಣಿತ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಕಮ್ಮಟವನ್ನು ನಡೆಸಿಕೊಟ್ಟು ಮಾತನಾಡಿ, “ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಹಾಗೂ ವಿಸ್ತರಿಸಲು ಡಿಜಿಟಲ್ ಜಗತ್ತು ಅಪೂರ್ವ ಅವಕಾಶಗಳನ್ನು ಒದಗಿಸಿದೆ. ತುಳು ವಿಕಿಪೀಡಿಯದಲ್ಲಿ ಈಗಾಗಲೇ ಮಹತ್ವದ ಮಾಹಿತಿಗಳು ದಾಖಲಾಗಿವೆ. ಆದರೆ ಅದು ನಿಂತ ನೀರಾಗಬಾರದು. ನಿರಂತರ ಪರಿಷ್ಕರಣೆ ಹಾಗೂ ಅಮೂಲ್ಯ ಮಾಹಿತಿಗಳ ದಾಖಲಾತಿ ಅಗತ್ಯ, ಎಂದು ತಿಳಿಸಿದರು. ಅವರು ವಿಕಿಪೀಡಿಯದಲ್ಲಿ ಲೇಖನ ಬರೆಯುವ ಕುರಿತು ಪ್ರಾಯೋಗಿಕ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಕಮ್ಮಟದಲ್ಲಿ ಕಾಲೇಜಿನ 50 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ಸದಸ್ಯ ಪಾಂಗಳ ಬಾಬು ಕೊರಗ, ಪ್ರಾಂಶುಪಾಲ ಡಾ. ಕುರಿಯನ್ ಇದ್ದರು. ಡಾ. ಯೋಗೀಶ ಕೈರೋಡಿ ಸ್ವಾಗತಿಸಿ, ಸೌಮ್ಯ ಕುಂದರ್ ನಿರೂಪಿಸಿ, ಅನಿಶಾ ಶೆಟ್ಟಿ ವಂದಿಸಿದರು.