ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ(ನಿ.) ಯು ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಆಗಸ್ಟ್ 31 ರಂದು ವೈಭವದ ದಶಮಾನೋತ್ಸವದ ಸಂಭ್ರಮದೊಂದಿಗೆ ಮಹಾಸಭೆಯನ್ನು ನಡೆಸಲಾಯಿತು. ಸದೃಢ ಸಮಾಜದ ಉದ್ದೇಶದೊಂದಿಗೆ ಸೊಸೈಟಿಯು ಪ್ರಾರಂಭಗೊಂಡಿದ್ದು ಇಂದು ಸಮಾಜದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಜನರ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸಮಾಜದ ಅಗತ್ಯತೆಗಳನ್ನು ಪೂರೈಸುವಲ್ಲಿಯೂ ಪ್ರಧಾನ ಪಾತ್ರ ವಹಿಸಿದೆ ಎಂದು ಸಂಘದ ಗೌರವಾಧ್ಯಕ್ಷರಾದ ವಂ. ಫಾ. ಲಾರೆನ್ಸ್ ಮಸ್ಕರೇನ್ಹಸ್ ಮಾತನಾಡಿ ಅಭಿನಂದಿಸಿದರು.

ಆಗಸ್ಟ್ 31ರಂದು  ಸೇಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆದ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಹಾಗೂ ದಶಮಾನೋತ್ಸವದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಲೆನ್ಸಿ ಪಿಂಟೊ ವಹಿಸಿ ಮಾತನಾಡಿದರು. 2024-25ನೇ ಆರ್ಥಿಕ ವರ್ಷದಲ್ಲಿ ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2843 ಸದಸ್ಯರಿದ್ದು ರೂ. 29.7 ಕೋಟಿ ದುಡಿಯುವ ಬಂಡವಾಳದೊಂದಿಗೆ ಆರ್ಥಿಕ ವರ್ಷದಲ್ಲಿ ರೂ107.46 ಕೋಟಿ ವ್ಯವಹಾರ ನಡೆಸಿ ಶೇಕಡ 97 ವಸೂಲಾತಿಯೊಂದಿಗೆ ರೂ1.12 ಕೋಟಿ ಲಾಭ ಗಳಿಸಿದೆ ಎಂದು ಅಧ್ಯಕ್ಷರಾದ ಶ್ರೀ ಲೆನ್ಸಿ ಪಿಂಟೊ ಹೇಳಿದರು. 

ಸಾಮಾಜಿಕ ಕೊಡುಗೆಗಳು : ಸಂಘವು  ಕಳೆದ 10 ವರ್ಷಗಳಲ್ಲಿ 386 ಬಡ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ರೂ 6.50 ಲಕ್ಷ ವಿಧ್ಯಾರ್ಥಿ ವೇತನ ವಿತರಣೆ, 13 ಸದಸ್ಯರಿಗೆ ರೂ.2.80ಲಕ್ಷ ವೈದ್ಯಕೀಯ ಆರ್ಥಿಕ ನೆರವು, ಕೋವಿಡ್ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತಕ್ಕೆ ರೂ.25ಸಾವಿರ ನೆರವು, ಭೀಕರ ಪ್ರವಾಹ ಸಂದರ್ಭದಲ್ಲಿ ಶಾಸಕರ ಕಾಳಜಿ ನಿಧಿಗೆ ರೂ.1ಲಕ್ಷ ನೆರವು, ಮೃತಪಟ್ಟ ಸಂಘದ ಸದಸ್ಯರ ಕುಟುಂಬದವರಿಗೆ ರೂ.35ಸಾವಿರ ಸಾಂತ್ವನ ನೆರವು, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‍ಗೆ ಸಾರ್ವಜನಿಕ ಸಮಾಜ ಅಭಿವೃದ್ಧಿ ನಿಧಿಯಿಂದ ಒಟ್ಟು ರೂ.25.66ಲಕ್ಷ ಸಹಾಯ ಧನ, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಗೆ ರೂ.20ಲಕ್ಷದ ವಿಜ್ಞಾನ ಪ್ರಯೋಗಾಲಯದ ಕೊಡುಗೆ,  ಮಡಂತ್ಯಾರು ಶಿಶು ವಿಹಾರದ ಅಭಿವೃದ್ಧಿ ಯೋಜನೆಗೆ ರೂ.10 ಸಾವಿರ ನೆರವು, ಮಡಂತ್ಯಾರು ಗಾರ್ಡಿಯನ್ ಏಂಜೆಲ್ಸ್ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ರೂ.30 ಸಾವಿರ ನೆರವು, ಮಡಂತ್ಯಾರು ಆಶಾದೀಪ ಚರ್ಚ್‍ನ ಸಾಮಾಜಿಕ ಚಟುವಟಿಕೆಗಳಿಗೆ ರೂ.25ಸಾವಿರದ ನೆರವು, 2020ರಲ್ಲಿ ಮಡಂತ್ಯಾರಿನಲ್ಲಿ ನಡೆದ ಕಥೋಲಿಕ ಸಭಾ ಮಹಾಸಮಾವೇಶಕ್ಕೆ ರೂ.5 ಲಕ್ಷದ ನೆರವು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಗಳ ವಿದ್ಯ್ಯಾರ್ಥಿಗಳಿಗೆ ರೂ.90 ಸಾವಿರ ಪ್ರೋತ್ಸಾಹ ಧನ, ಸಂಘದ ಸದಸ್ಯರ ಮನೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ರೂ.75ಸಾವಿರ ಆರ್ಥಿಕ ನೆರವು, ಪುರಿಯ ಅಂಗನವಾಡಿ ಶಾಲೆಯ ಬಾಲವನ ನಿರ್ಮಾಣಕ್ಕೆ ರೂ.60 ಸಾವಿರ, ದಯಾ ವಿಶೇಷ ಚೈತನ್ಯ ಮಕ್ಕಳಿಗೆ ರೂ.10 ಸಾವಿರದ ನೆರವು ನೀಡಲಾಗಿದೆ.


ದಶಮಾನೋತ್ಸವದ ಕೊಡುಗೆ: ದಶಮಾನೋತ್ಸವದ ಸವಿನೆನಪಿಗಾಗಿ ಸಂಘದ ಎಲ್ಲಾ ಸದಸ್ಯರಿಗೆ 25% ಡಿವಿಡೆಂಡ್ ಮತ್ತು 25% ಎಕ್ಸ್‍ಗ್ರೇಶಿಯಾ, 25 ಲಕ್ಷದ ವರೆಗಿನ ಗೃಹ ಸಾಲಕ್ಕೆ 0.5% ಬಡ್ಡಿ ರಿಯಾಯಿತಿ, ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾ ಸಂಸ್ಥೆಗಳಿಗೆ ಸುಸಜ್ಜಿತ ಸಭಾಂಗಣ ನಿರ್ಮಾಣಕ್ಕೆ ರೂ.25ಲಕ್ಷ ಅನುದಾನ, ವೈಯುಕ್ತಿಕ ಕ್ರೀಡೆಗಳಲ್ಲಿ ಕ್ರೀಡಾ ಸಾಧನೆ ಮಾಡಿದ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ  ವಿದ್ಯಾರ್ಥಿಗಳಿಗೆ ರೂ.2.5ಲಕ್ಷ ಆರ್ಥಿಕ ನೆರವು ಘೋಷಿಸಿದೆ.

ಸಂಘವು ಆರ್ಥಿಕ ವರ್ಷದ ಲೆಕ್ಕ ಪರಿಶೋಧನೆಯಲ್ಲಿ ಎ ಮಾನ್ಯತೆ ಪಡೆದಿದ್ದು ಇದುವರೆಗೆ ಸತತ 3 ಬಾರಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ನಿ.) ಇದರ ಸಾಧನಾ ಪ್ರಶಸ್ತಿಗೆ ಭಾಜನವಾಗಿದೆ. ಸತತ 8 ವರ್ಷ ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡುತ್ತಿರುವುದು ಸಂತಸದ ವಿಚಾರ ಎಂದು ಸಂಘದ ಮುಖ್ಯ ಸಲಹೆಗಾರರಾದ ಮೋನಪ್ಪ ಪೂಜಾರಿ ಕಂಡೆತ್ಯಾರು ತಿಳಿಸಿದರು.

ಸೇಕ್ರೆಡ್ ಹಾರ್ಟ್ ಚರ್ಚ್‍ನ ಪ್ರಧಾನ ಧರ್ಮಗುರುಗಳಾದ ವಂ. ಫಾ. ಸ್ಟಾನಿ ಗೋವಿಯಸ್, ಸಹಾಯಕ ಧರ್ಮಗುರುಗಳಾದ ವಂ.ಫಾ. ಲ್ಯಾರಿ ಪಿಂಟೊ, ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಂ.ಫಾ.ದೀಪಕ್ ಲಿಯೋ ಡೇಸಾ,  ವೃತ್ತಿಪರ ನಿರ್ದೇಶಕರಾದ ಲಿಯೋ ನೊರೋನ್ಹಾ, ಫೆಲಿಕ್ಸ್ ಡಿ ಕೋಸ್ತಾ, ನಿರ್ದೇಶಕರಾದ ಸಿರಿಲ್ ಸಿಕ್ವೇರಾ, ಜೋಯಲ್ ಗೋಡ್ ಫ್ರೀ ಮೆಂಡೋನ್ಸ,  ಗ್ರೆಗೊರಿ ಸೇರಾ, ರೊನಾಲ್ಡ್ ಸಿಕ್ವೇರಾ,  ಸೆಲೆಸ್ತಿನ್ ಡಿ ಸೋಜಾ, , ಗ್ರೇಸಿ ರೀಟಾ ರೆಬೆಲ್ಲೊ, ಫ್ರಾನ್ಸಿಸ್ ವಿ.ವಿ., ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಲೇರಿಯನ್ ಡಿ ಸೋಜಾ ವರದಿ ವಾಚಿಸಿದರು. ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾೈಸ್ ಸ್ವಾಗತಿಸಿ, ಲಿಯೊ ರೊಡ್ರಿಗಸ್ ವಂದಿಸಿದರು. ರೋಬಿನ್ ಸೆರಾ ನಿರೂಪಿಸಿದರು. ಸಿಬ್ಬಂದಿ ಡೋನ್ ಪ್ರವೀಣ್ ಕ್ರಾಸ್ತಾ, ಶ್ವೇತಾ ರಾವ್, ಜೀವನ್, ರಮೇಶ್ ಹಾಗೂ ಅಲ್ವಿನ್ ಪಿಂಟೊ ಸಹಕರಿಸಿದರು.


ವರದಿ : ವಿವೇಕ್ ವಿ. ಪಾೈಸ್