ಕಾರ್ಕಳ, ಸೆ. 12: ಕಾರ್ಕಳ ತಾಲೂಕು ಕಚೇರಿ ಬಳಿಯ ಪತ್ರಿಕಾ ಭವನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶುಕ್ರವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾರ್ಕಳದಲ್ಲಿ ಶಾಶ್ವತ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯವಾದ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ಪತ್ರಕರ್ತರು ಸಮಾಜದಲ್ಲಿ ಪಾರದರ್ಶಕತೆ, ಸ್ವಚ್ಛತೆ ಹಾಗೂ ಜಾಗೃತಿ ಮೂಡಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು. ಉಡುಪಿ ಜಿಲ್ಲೆಯ ರಜತ ಮಹೋತ್ಸವ ಸಮಿತಿಯ  ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದಿನಾಂಕ ನಿಗದಿಗೊಳಿಸುವುದಾಗಿ ತಿಳಿಸಿದರು.

ಉಡುಪಿ ಜಿಲ್ಲೆಯ ಜನರು ದಾನಧರ್ಮ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಇತರ ಜಿಲ್ಲೆಗಳಿಗೆ ಮಾದರಿಯಾಗಿದ್ದಾರೆ. ಸರಕಾರದ ಕಾರ್ಯಕ್ರಮಗಳ ಜೊತೆಗೆ ಖಾಸಗಿ ಮಟ್ಟದಲ್ಲೂ ಸಹಕರಿಸುವ ಮನೋಭಾವವನ್ನು ಹೊಂದಿರುವುದು ಈ ಜಿಲ್ಲೆಯ ವಿಶೇಷವೆಂದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ, ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರ ಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಸಚಿವೆಗೆ ಸನ್ಮಾನ ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್ ಪ್ರಸ್ತಾವಿಕ ಮಾತನಾಡಿದರು.