ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆ: ಅತ್ಯಂತ ಪ್ರಭಾವಿ ಸರಕಾರಿ ಉದ್ಯೋಗ, ಪಾಲಿಟಿಕ್ಸ್, ಮಾಧ್ಯಮಗಳಲ್ಲಿ ವಿದ್ಯಾರ್ಥಿಗಳು ಮಾಧ್ಯಮವನ್ನು ಆಯ್ಕೆ ಮಾಡಿ. ಎ.ಐ. ಕಲಿತು ಸತ್ಯ ನಿಷ್ಠೆಯ ಸುದ್ದಿಗಳನ್ನು ಬಿತ್ತರಿಸಿ, ಪ್ರಕಟಿಸಿ ಯಾರ, ಯಾವ ಮುಲಾಜಿಗೂ ಒಳಗಾಗದೆ ಮಾಧ್ಯಮದ ಮೂಲಕ ಅಂಕುಡೊಂಕು ತಿದ್ದುವ ಎದೆಗಾರಿಕೆಯನ್ನು ವಿದ್ಯಾರ್ಥಿಗಳು ತೋರಬೇಕೆಂದು ವಾಲ್ಟರ್ ನಂದಳಿಕೆಯವರು ಆಶಿಸಿದರು.

ಅವರು ಜುಲೈ 1 ರಂದು ಮೂಡುಬಿದಿರೆ ಪತ್ರಕರ್ತರು ಹಮ್ಮಿಕೊಂಡಿದ್ದ ಮಾಧ್ಯಮ ಹಬ್ಬದಲ್ಲಿ ಸದಾನಂದ ಹೆಗಡೆ ಕಟ್ಟೆ ಪ್ರಾಯೋಜಿತ ಉಪನ್ಯಾಸಕಾರರಾಗಿ ಮಾತನಾಡಿದರು. 

ನಂಬಿಕಸ್ಥ ವರದಿಗಾರರನ್ನು ಜನ ಗುರುತಿಸುತ್ತಾರೆ. ಅಂತಹ ಪತ್ರಿಕೆಗಳನ್ನು ಓದುವವರು ಇಂದಿಗೂ ಇದ್ದಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಮಾಧ್ಯಮ ಮಂದಿಗೆ ಶುಭ ಹಾರೈಸಿದರು. ಎಲ್ಲಾ ರೀತಿಯ ಅನುದಾನ ಪತ್ರಕರ್ತರ ಭವನಕ್ಕೆ ಒದಗಿಸಿ ಆದಷ್ಟು ಶೀಘ್ರ ಉದ್ಘಾಟನೆಗೊಳಿಸುವ ಭರವಸೆ ನೀಡಿದರು.

ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ ಉತ್ತಮ ವರದಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದರು. ನ್ಯೂಸ್ ಫಸ್ಟ್ ನ ಸುದ್ದಿ ವಾಚಕರಾದ ಪಡುಮಾರ್ನಾಡು ಮೂಲದ ವಾಸುದೇವ ಭಟ್ ಮಾಧ್ಯಮ ಸಂಮಾನ ಸ್ವೀಕರಿಸಿ ಅಂಕುಡೊಂಕು ತಿದ್ದುವ ಪ್ರಬುದ್ಧತೆ ಬೆಳೆಸಿಕೊಳ್ಳವ ಅಗತ್ಯ ಪತ್ರಕರ್ತರಿಗೆ ಇದೆ ಎಂದು ತಿಳಿಸಿದರು.

ಕೆಲಸವನ್ನು ವಿಭಿನ್ನ ರೀತಿಯಲ್ಲಿ ಮಾಡಿ ಮೇರು ವ್ಯಕ್ತಿತ್ವ ತೋರ್ಪಡಿಸುವಾತ ಬೆಳಗುತ್ತಾನೆ ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು.

ಪ್ರೆಸ್ ಕ್ಲಬ್ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಪ್ರಸನ್ನ ಹೆಗ್ಡೆ ಸ್ವಾಗತಿಸಿದರು. ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು. ನವೀನ ಸಾಲ್ಯಾನ್ ವಂದಿಸಿದರು.