ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸುಮಾರು 16 ವರೆ ಕೋಟಿ ವೆಚ್ಚದಲ್ಲಿ ಸಂಪೂರ್ಣ ಜೀರ್ಣೋದ್ಧಾರದೊಂದಿಗೆ ಸುಶೋಭಿಸುತ್ತಿರುವ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಾಲಯ, ಮಹಿಷಮರ್ಧಿನಿ ಅಮ್ಮನವರು ಹಾಗೂ ಪರಿವಾರ ದೇವರುಗಳ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಫೆಬ್ರವರಿ 28 ರಿಂದ ಮಾರ್ಚ್ 7 ರ ತನಕ ನಡೆಯಲಿದೆ. ಬರುವ ಎಲ್ಲಾ ಭಕ್ತಾದಿಗಳಿಗೆ ಬೆಳಗ್ಗೆ, ಸಂಜೆ ಉಪಹಾರ, ಮಧ್ಯಾಹ್ನ, ರಾತ್ರಿ ಅನ್ನ ಪ್ರಸಾದಗಳು ಇರಲಿದೆ.
ಈಗಾಗಲೇ ಸುಮಾರು ರೂ.30,000 ಆಮಂತ್ರಣ ಪತ್ರಿಕೆಗಳನ್ನು ವಿತರಿಸಲಾಗಿದ್ದು ಒಂದು ಲಕ್ಷಕ್ಕೂ ಮಿಕ್ಕಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಫೆಬ್ರವರಿ 28ರಂದು ಮೂಡುಬಿದಿರೆ ಸ್ವರಾಜ್ಯ ಮೈದಾನ, ಚೌಟ ಅರಮನೆ ಮೂಲಕ ಬರುವ ಹಸಿರು ಹೊರೆ ಕಾಣಿಕೆ ಯಲ್ಲಿ ದೇವರ ಸ್ವರ್ಣ ಶಿರೋ ಕಲಶ ಪ್ರಧಾನವಾಗಿದ್ದು, ಚೆಂಡೆ, ಕುಣಿತ ಭಜನೆ, ಹಾಡುಗಳು, ಬಿರುದು ಬಾವಲಿಗಳು ಮೆರವಣಿಗೆಯಲ್ಲಿ ತುಂಬಿಕೊಳ್ಳಲಿವೆ.
ಹದಿನೆಂಟು ಮಾಗಣೆಗಳ 77 ಗ್ರಾಮ ವ್ಯಾಪ್ತಿಯ ಪುತ್ತಿಗೆ ದೇವಾಲಯದ ಷಡ್ಭುಜ ಮಹಿಷಮರ್ಧಿನಿ ಅಮ್ಮನವರು, ಸೋಮನಾಥೇಶ್ವರ ದೇವರು, ಪರಿವಾರ ದೈವ ದೇವರುಗಳ ಪ್ರತಿಷ್ಠಾಪನೆ ನಡೆಯಲಿದೆ. ಆಯ ವೃದ್ಧಿಸಿಕೊಂಡು ಸುಮಾರು 3 ಎಕರೆ ಪ್ರದೇಶದಲ್ಲಿ ಮೂರು ಪ್ರಾಂಗಣದಲ್ಲಿ ಅಭೂತಪೂರ್ವವಾಗಿ ಊರವರು ಕರಸೇವಕರಾಗಿ, ಊರ ಪರವೂರ ಭಕ್ತಾದಿಗಳು ದಾನಿಗಳಾಗಿ ನೀಡುತ್ತಿರುವ ಸಹಕಾರ ಮರೆಯಲು ಸಾಧ್ಯವಿಲ್ಲ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ, ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಚೌಟರ ಅರಮನೆಯ ಕುಲದೀಪ್ ಎಂ ಪತ್ರಿಕಾ ಗೋಷ್ಠಿಯಲ್ಲಿ ನೆನಪಿಸಿಕೊಂಡರು. ಸಮಿತಿಯ ಜತೆ ಕಾರ್ಯದರ್ಶಿ, ಉದ್ಯಮಿ ಶ್ರೀಪತಿ ಭಟ್ ಮಾತನಾಡಿ ಇಲ್ಲಿಯ ಜೋಡುಬಲಿ, ಆಳು ಪಲ್ಲಕ್ಕಿ ಉತ್ಸವ ಪ್ರಖ್ಯಾತ. 800 ವರ್ಷದ ಇತಿಹಾಸದ ಹೆಸರಾಂತ ಪುಣ್ಯ ಕ್ಷೇತ್ರ ಇಷ್ಟು ಉತ್ತಮವಾಗಿ ಜೀರ್ಣೋದ್ಧಾರಗೊಂಡುದು ನಮ್ಮ ಪುಣ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪುತ್ತಿಗೆ ಗುತ್ತು ಕೊಲಕಾಡಿ ನೀಲೇಶ್ ಶೆಟ್ಟಿ, ಉಪಾಧ್ಯಕ್ಷ ಕುಂಗೂರು ಚಾವಡಿ ಮನೆ ಶಿವಪ್ರಸಾದ್ ಆಚಾರ್, ಜೊತೆ ಕಾರ್ಯದರ್ಶಿ ವಿದ್ಯಾ ರಮೇಶ್ ಭಟ್, ವಾದಿರಾಜ ಮಡ್ಮಣ್ಣಾಯ, ಎಂ.ಸಿ.ಎಸ್.ಅಧ್ಯಕ್ಷ ಬಾಹುಬಲಿ ಪ್ರಸಾದ್ ಹಾಜರಿದ್ದರು.
ಊರವರ ಸಹಕಾರದಿಂದ ಸುಮಾರು 15 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಹತ್ತು ಕೌಂಟರ್ ಗಳಲ್ಲಿ ಭಕ್ತಾದಿಗಳಿಗೆ ವಿಶೇಷ ವ್ಯವಸ್ಥೆ ಇರುತ್ತದೆ. ಡಾಮರು ಕಾರ್ಯ ಆರಂಭವಾಗಿ ನವವಧುವಿನಂತೆ ರಸ್ತೆ, ತಳಿರು ತೋರಣಗಳಿಂದ ಅಲಂಕರಿಸಲ್ಪಡುತ್ತಿದೆ. ಈ ಕಾರ್ಯಗಳಿಗೆ ಊರವರ ಸಹಕಾರ, ಜನ ಪ್ರತಿನಿಧಿ ಉಮಾನಾಥ ಕೋಟ್ಯಾನ್, ಬ್ರಿಜೇಶ್ ಚೌಟ ಹಾಗೂ ಮುಗ್ರೋಡಿ ಸುಧಾಕರ ಶೆಟ್ಟಿ ಅವರು ಮುತುವರ್ಜಿ ವಹಿಸಿ ಸಹಕರಿಸುತ್ತಿದ್ದಾರೆ ಎಂದು ಸ್ಮರಿಸಿದರು.