ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಂತರಿಕ ಸಮಿತಿಯು ಬುಧವಾರ ಕಾಲೇಜಿನ ವಿಎಸ್ ಆಚಾರ್ಯ ಸಭಾಂಗಣದಲ್ಲಿ “ನಿತ್ಯ ಜೀವನದಲ್ಲಿ ಕಾನೂನು” ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಬಂಟ್ವಾಳದ ಹಿರಿಯ ನ್ಯಾಯವಾದಿ ಶೈಲಜಾ ರಾಜೇಶ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಕಾನೂನಿನ ಮಹತ್ವ ಹಾಗೂ ಜೀವನದಲ್ಲಿನ ಅದರ ಅನ್ವಯ ಕುರಿತು ಮಾರ್ಗದರ್ಶನ ನೀಡಿದರು.
ಮನುಷ್ಯನ ಬದುಕಿನ ಪ್ರತಿಯೊಂದು ಹಂತವೂ ಕಾನೂನಿನ ನಿಯಮಗಳು, ಹಕ್ಕುಗಳು ಮತ್ತು ಕರ್ತವ್ಯಗಳಿಂದ ಕೂಡಿರುತ್ತದೆ. ಜನನದಿಂದ ಆರಂಭಿಸಿ ಸಾವಿನವರೆಗಿನ ಪ್ರತಿಯೊಂದು ಪ್ರಕ್ರಿಯೆಯು ಕಾನೂನು ನಿರ್ದಿಷ್ಟಗೊಳಿಸಿದ ವ್ಯವಸ್ಥೆಯೊಳಗೆ ನಡೆಯುತ್ತದೆ. ಕಾನೂನಿನ ಈ ಚೌಕಟ್ಟಿನ ಅರಿವಿದ್ದಾಗ ನಾವೂ ಜವಾಬ್ದಾರಿಯಿಂದ ಸಮಾಜದಲ್ಲಿ ಬದುಕಲು ಸಾಧ್ಯ ಎಂದರು. ಮಹಿಳೆಯರು ಸಮಾಜದಲ್ಲಿ ಅನೇಕ ಬಾರಿ ವಂಚನೆಗೆ ಒಳಗಾಗುತ್ತಾರೆ ಎಂಬುದು ಸತ್ಯ. ಆದರೆ ಕೆಲವರು ಅದೇ ಕಾನೂನನ್ನು ದುರುಪಯೋಗ ಪಡಿಸಿಕೊಂಡ ಉದಾಹರಣೆಗಳಿವೆ ಎಂದರು.
“ನಾವೆಲ್ಲ ಹಕ್ಕುಗಳ ಬಗ್ಗೆ ಹೆಚ್ಚು ಚರ್ಚಿಸುತ್ತೇವೆ, ಆದರೆ ಕರ್ತವ್ಯಗಳಿಂದ ದೂರವಾಗುತ್ತಿರುವುದು ದುಂಖಕರ. ಮಕ್ಕಳು ಸುಖ ಜೀವನದಲ್ಲೇ ಬೆಳೆದರೆ ಕಷ್ಟದ ಮೌಲ್ಯ ಅರಿಯಲಾರರು. ಶ್ರೀಮಂತಿಕೆ ಹಣದಿಂದಲ್ಲ, ಪ್ರೀತಿ, ಮಮತೆ, ಗುಣ ಹಾಗೂ ಸಂಸ್ಕಾರದಿಂದ ಅಳೆಯಲ್ಪಡುತ್ತದೆ. ಗಂಡು ಹಾಗೂ ಹೆಣ್ಣು ಇಬ್ಬರೂ ಕುಟುಂಬ ಹಾಗೂ ಸಮಾಜದ ಆಸ್ತಿಯಾಗಿ ಬೆಳೆಯಬೇಕಾದರೆ ಶಿಕ್ಷಣ ಅತ್ಯಗತ್ಯ. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಕಾನೂನಿನ ಚೌಕಟ್ಟನ್ನು ಅರ್ಥಮಾಡಿಕೊಂಡು ಬದುಕುವುದೇ ನಿಜವಾದ ಜೀವನ ಎಂದು ತಿಳಿಸಿದರು.
ಸಾಮಾಜಿಕ ಮಾಧ್ಯಮಗಳನ್ನು ಜಾಣ್ಮೆಯಿಂದ ಬಳಸಬೇಕು. ಮೊಬೈಲ್ ಬಳಕೆ ಅಡಿಕ್ಷನ್ ಇದ್ದ ಹಾಗೆ, ಒಂದು ಸಲ ಈ ಜಂಜಾಟದಲ್ಲಿ ಸಿಲುಕಿದರೆ ನಮ್ಮನ್ನೇ ನಾವು ಮರೆಯುತ್ತೇವೆ. ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸ ಮತ್ತು ಸಂಸ್ಕಾರಗಳನ್ನು ಬೆಳೆಸಿಕೊಳ್ಳಿ. ಸಂಸ್ಕಾರದ ಜೊತೆ ಶಿಕ್ಷಣ ದೊರಕಿದಾಗ ಮಾತ್ರ ಅದು ಸಂಪೂರ್ಣ ಶಿಕ್ಷಣವೆನಿಸಿಕೊಳ್ಳುತ್ತದೆ. ಆಳ್ವಾಸ್ ಅಂತಹ ಶಿಕ್ಷಣವನ್ನು ನೀಡುತ್ತಿದೆ. ನಿಜವಾದ ನಾಯಕತ್ವವೆಂದರೆ ತಾನು ನಾಯಕನಾಗಿ ಬೆಳೆದು ಮತ್ತೊಬ್ಬ ನಾಯಕನನ್ನು ರೂಪಿಸುವುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಸದಾಕತ್ ಮಾತನಾಡಿ, “ಪರಹಿತವನ್ನು ಬಯಸುವ ಮನಸ್ಸಿನೊಳಗೆ ದೇವರು ನೆಲೆಸಿದ್ದಾನೆ ಎಂಬ ಗಾಂಧೀಜಿಯ ತತ್ವವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಅಧ್ಯಕ್ಷರು ಸದಾ ಪಾಲಿಸಿಕೊಂಡು ಬರುತ್ತಿದ್ದಾರೆ. ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ಆಂತರಿಕ ಸಮಿತಿಯ ಸಂಚಾಲಕಿ ಡಾ. ಸುಲತಾ ಹಾಗೂ ಅಧ್ಯಾಪಕರು ಇದ್ದರು. ಉಪನ್ಯಾಸಕ ಅರುಣಕುಮಾರ್ ಕಾರ್ಯಕ್ರಮ ನಿರೂಪಿಸಿದರು.