ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಮೂಡುಬಿದಿರೆ ಪುರಸಭೆಯ ಮಾಸಿಕ ಸಭೆ ಮೇ 29ರಂದು ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷೆ ಜಯಶ್ರೀ ವಹಿಸಿದ್ದರು. ಸ್ಥಾಯಿ ಸಮಿತಿಯ ಅಧ್ಯಕ್ಷರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ವೇದಿಕೆಯಲ್ಲಿ ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ ಹಾಜರಿದ್ದರು. 

ಸ್ವರಾಜ್ಯ ಮೈದಾನದಿಂದ ಆಳ್ವಾಸ್ ತನಕದ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಚರಂಡಿಯನ್ನು ಮಣ್ಣು ಹಾಕಿ ಮುಚ್ಚಿದ್ದರಿಂದಾಗಿ ಮುಖ್ಯರಸ್ತೆಯೇ ಮಳೆಯ ನೀರು ಹೋಗುವ ಚರಂಡಿಯಾಗಿ ಪರಿವರ್ತನೆಯಾಗಿದೆ. ಆದಷ್ಟು ಶೀಘ್ರ ಚರಂಡಿಯನ್ನು ಬಿಡಿಸಿ ಮಳೆ ನೀರು ಸಾರ್ವಜನಿಕರ ಮೇಲೆ ಎರಚದಂತೆ ಕ್ರಮಕೈಗೊಳ್ಳಬೇಕೆಂದು ಎಲ್ಲ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಇದಕ್ಕೆ ರಾಜೇಶ್ ನಾಯಕ್, ಸುರೇಶ್ ಪ್ರಭು, ಕೊರಗಪ್ಪ ಹಾಗೂ ಇತ್ಯಾದಿಯರು ಪೂರ್ಣ ಬೆಂಬಲ ಸೂಚಿಸಿ ನಾಲ್ಕಾರು ದಿನಗಳೊಳಗೆ ಕಾಮಗಾರಿ ಮುಗಿಯುವಂತೆ, ಶಾಲೆ ಪ್ರಾರಂಭವಾಗುತ್ತಿರುವುದರಿಂದ ಮತ್ತಷ್ಟು ಶೀಘ್ರ ಕಾಮಗಾರಿ ನಡೆದು ನಡೆದಾಡುವ ಮಕ್ಕಳ ಮೇಲೆ ಕೆಸರು ನೀರು ಹಾರದಂತೆ ಮಾಡಲೇಬೇಕೆಂದು ಕೈಮುಗಿದು ಕೇಳಿಕೊಂಡರು. 

ಕಳೆದ ಒಂದು ವಾರದಿಂದ ಅವ್ಯಾಹತವಾಗಿ ಮಳೆ ಸುರಿಯುತ್ತಿದ್ದಾಗಿಯೂ ವಿವೇಕಾನಂದ ನಗರ, ಮಂಜುನಾಥ ನಗರಗಳಲ್ಲಿ ಕುಡಿಯುವ ನೀರಿಗಾಗಿ ಜನರು ಒದ್ದಾಡುತ್ತಿದ್ದಾರೆ, ಕನಿಷ್ಠ ಇವತ್ತಾದರೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಕೊರಗಪ್ಪ ಮುಖ್ಯಾಧಿಕಾರಿಗಳಲ್ಲಿ ಕೇಳಿಕೊಂಡರು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಸದಸ್ಯರೆಲ್ಲರೂ ತಮ್ಮ ಬೆಂಬಲವನ್ನು ಕೊರಗಪ್ಪರಿಗೆ ವ್ಯಕ್ತಪಡಿಸಿದ್ದರು. ಇಂದು ಸಂಜೆಯೊಳಗೆ ಸೂಕ್ತ ವ್ಯವಸ್ಥೆಯನ್ನು ಮಾಡುವ ಭರವಸೆ ಅಧಿಕಾರಿಗಳಿಂದ ದೊರೆಯಿತು. 

ಮಾಜಿ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅವರು, ಅಂಗಜಾಲು ಪ್ರದೇಶದಲ್ಲಿ 25 ಮನೆಗೆ ನೀರು ನುಗ್ಗಿದೆ. ಆ ಪ್ರದೇಶದಲ್ಲಿದ್ದ 15 ಅಡಿ ಹೊಂಡವನ್ನು ಮಣ್ಣು ಹಾಕಿ ಮುಚ್ಚಿದ ಕಾರಣ ಈ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ತಕ್ಷಣ ಆ ಹೊಂಡದ ಮಣ್ಣನ್ನು ಜೆಸಿಬಿ ಯಿಂದ ನಿವಾರಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕೆಂದು ಅಧಿಕಾರಿಗಳಲ್ಲಿ ಕೇಳಿಕೊಂಡರು.

ಹುಡ್ಕೋ ಕಾಲೋನಿಯಲ್ಲಿ ಪುರಸಭೆಯ ಕುಡಿಯುವ ನೀರಿನ ಟ್ಯಾಂಕಿ ಇದ್ದೂ, ಪುರಸಭೆಯವರು ಜಾಕ್ವಾಲನ್ನು ಸರಿಪಡಿಸದ ಕಾರಣ ಕುಡಿಯಲು ನೀರಿಲ್ಲದಂತಾಗಿದೆ ಎಂದು ಸುರೇಶ್ ಪ್ರಭು ನೇರವಾಗಿ ಆಪಾದಿಸಿದರು. ಇದಕ್ಕೆ ಪೂರಕವಾಗಿ ಕೊರಗಪ್ಪ ಹಾಗೂ ಪಿ ಕೆ ತೋಮಸ್ ತಮ್ಮ ಬೆಂಬಲವನ್ನು ಸೂಚಿಸಿದರು. ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಸುಮಾರು ಎರಡುವರೆ ಸಾವಿರಕ್ಕೂ ಹೆಚ್ಚು ಮನೆಗಳಿಗೆ ಸ್ವಂತ ಬಾವಿಯಿಲ್ಲ, ಅವರೆಲ್ಲರೂ ಪುರಸಭೆಯ ನೀರಿಗಾಗಿ ಕಾಯುತ್ತಿರುತ್ತಾರೆ ಕಳೆದ ನಾಲ್ಕು ದಿನಗಳಿಂದ ಹುಡ್ಕೋ ಕಾಲೋನಿಯಲ್ಲಿ ನೀರು ಸರಬರಾಜು ಇಲ್ಲದ ಕಾರಣ , ಪದೇಪದೇ ಹೇಳಿದರೂ ಟ್ಯಾಂಕರ್ ನೀರು ಪೂರೈಸದ ಕಾರಣ ಜನರು ವಿಲವಿಲ ಒದ್ದಾಡುತ್ತಿದ್ದಾರೆ.  ತಕ್ಷಣ ನೀರನ್ನು ಪೂರೈಸಬೇಕೆಂದು ಕೊರಗಪ್ಪ  ಖಾರವಾಗಿ ಆಗ್ರಹಿಸಿದರು. 

ನೀರಿನ ಪಂಪುಗಳ ನಿರ್ವಹಣೆಗಾಗಿಯೇ ಸುಮಾರು 1.6 ಲಕ್ಷ ವೆಚ್ಚ ಮಾಡುತ್ತಿರುವ ಪುರಸಭೆಯಲ್ಲಿ ಹಿಂದೆ 25 ಪಂಪುಗಳು ಹಾಳಾದ ಪಂಪುಗಳಿಗೆ ಬದಲಿಸಲು ರೆಡಿಯಾಗಿರುತ್ತಿದ್ದು ಇಂದು ಏಕೆ ಇಲ್ಲ ಎಂದು ಪಿಕೆ ತೋಮಸ್ ಅಧ್ಯಕ್ಷರಲ್ಲಿ ಪ್ರಶ್ನಿಸಿದರು. ಕಳೆದ ಆರು ತಿಂಗಳ ಹಿಂದೆ ಒಪ್ಪಿತವಾದ ಡಾಮರೀಕರಣದ ಕೆಲಸ ಮಳೆಯಿಂದಾಗಿ ಬಾಕಿ ಆದ ಕಾರಣವನ್ನು ಪ್ರಶ್ನಿಸಿದಾಗ ತಾಂತ್ರಿಕ ಅಡಚಣೆಗಳ ಬಗ್ಗೆ ಪುರಸಭಾ ಇಂಜಿನಿಯರ್ ಮಾಹಿತಿಯನ್ನು ಸಭೆಗೆ ನೀಡಿದರು. ಈ ಸಂದರ್ಭದಲ್ಲಿ ಆಡಳಿತದವರು ವಿರೋಧ ಪಕ್ಷದವರ ಕಡೆಗೆ ಬೊಟ್ಟು ಮಾಡಿದರೆ, ವಿರೋಧ ಪಕ್ಷದವರು ಆಡಳಿತದವರ ಕಡೆಗೆ ಬೊಟ್ಟು ಮಾಡುವ ಮೂಲಕ ಸಭೆ, ನಗುವಿನಲ್ಲಿ ತೇಲಾಡಿತು. 

ಕೇವಲ ಒಂದುವರೆ, ಎರಡು ಸೆಂಟ್ಸ್ ಸ್ಥಳದಲ್ಲಿ ಮನೆ ಕಟ್ಟಿ ಬದುಕುವವರಿಗೆ ಡೋರ್ ನಂಬರ್ ನೀಡದೆ ಅನಗತ್ಯ ತೊಂದರೆ ಕೊಡುತ್ತಿರುವವರ ಬಗ್ಗೆ ಮುಖ್ಯಾಧಿಕಾರಿಗಳು ವಿಚಾರಿಸಿ ಒಪ್ಪಿತವನ್ನು ನೀಡಬೇಕು. ಯಾವುದೇ ರೀತಿಯಲ್ಲಿಯೂ ಬಡವರಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕೆಂದು ಸುರೇಶ್ ಪ್ರಭು ಮುಖ್ಯಾಧಿಕಾರಿಗಳಲ್ಲಿ ವಿಜ್ಞಾಪಿಸಿದರು.

ಹಳೆ ಮಾರುಕಟ್ಟೆ, ಸ್ವರಾಜ್ ಮೈದಾನದ ತಾತ್ಕಾಲಿಕ ಮಾರುಕಟ್ಟೆ, ಇತ್ಯಾದಿ ಪ್ರದೇಶಗಳಲ್ಲಿ ಸೀಯಾಳ, ಗುಜರಿ ಇತ್ಯಾದಿಗಳಲ್ಲಿ ನೀರು ತುಂಬಿ ಸೊಳ್ಳೆ, ಕೊರೋನಾ ಇತ್ಯಾದಿಗಳಿಗೆ ಆಶ್ರಯ ತಾಣವಾಗುವ ಸಾಧ್ಯತೆ ಇರುವುದರಿಂದಾಗಿ ಆದಷ್ಟು ಶೀಘ್ರವಾಗಿ ಆ ಎಲ್ಲ ಪ್ರದೇಶಗಳನ್ನು ಸ್ವಚ್ಛಗೊಳಿಸಿ ಶುಚಿತ್ವವನ್ನು ಕಾಪಾಡಬೇಕೆಂದು ಎಲ್ಲ ಸದಸ್ಯರು ಒಕ್ಕೋರಲಿನಿಂದ ಆಗ್ರಹಿಸಿದರು.

ಸ್ವರಾಜ್ಯ ಮೈದಾನದ ಮೈಕ್ರೋ ಟವರ್ ನ ಸುರಕ್ಷತೆಯ ಬಗ್ಗೆ ಕೊರಗಪ್ಪ ಹಾಗೂ ಪಿ ಕೆ ತೋಮಸ್ ಪ್ರಶ್ನೆ ಎತ್ತಿದರು. ಬೀಸುವ ಗಾಳಿ ಹಾಗೂ ಸುರಿಯುವ ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸುರಕ್ಷತೆಯನ್ನು ತಿಳಿದುಕೊಳ್ಳಬೇಕೆಂದು ಅಧ್ಯಕ್ಷರಲ್ಲಿ ಕೇಳಿಕೊಂಡರು. 

ಮೇಲಿನ ಹಲವಾರು ಚರ್ಚೆಗಳಲ್ಲಿ ಪುರಂದರ ದೇವಾಡಿಗ, ಇಕ್ಬಾಲ್ ಕರೀಂ, ಸೌಮ್ಯ ಶೆಟ್ಟಿ, ಕುಶಲ ದೇವಾಡಿಗ, ಸುಜಾತಾ, ಶ್ವೇತಾ ಕುಮಾರಿ, ದಿವ್ಯಾ, ರಾಜೇಶ್ ನಾಯಕ್, ರೂಪಾ ಶೆಟ್ಟಿ, ಸಕ್ರಿಯವಾಗಿ ಭಾಗವಹಿಸಿದ್ದರು.