ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ:  ಸಾರವ ಶಬ್ದ ತಿಳಿಸುವಂತೆ ಸಂಗೀತದಲ್ಲಿ ಎಲ್ಲರೂ ಒಂದುಗೂಡಿ ಬೆಳೆಯಬೇಕು. ಮಕ್ಕಳಿಗೆ ಜೀವನದ ಪಾಠವನ್ನು ಕಲಿಸಿ ಒಳ್ಳೆಯದರ ಕಡೆಗೆ ಅವರ ಮನಸ್ಸನ್ನು ತಿರುಗಿಸಬೇಕಾಗಿದೆ. ಸನಾತನ ಪರಂಪರೆಯ ಜೀವನ ಮೌಲ್ಯವನ್ನು ಕಲಿಸಿ, ಉಳಿಸಿ ಬೆಳೆಸುವ ಪ್ರಯತ್ನ ಆಗಬೇಕಾಗಿದೆ ಎಂದು ಮಾಜಿ ಶಾಸಕ ಗಣೇಶ್ ಕಾರ್ಣಿಕ್ ನುಡಿದರು. 

ಅವರು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಫೆಬ್ರವರಿ 9ರಂದು ಸಾರವ ಕಲಾ ಸಂಗೀತೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ ಸಂಗೀತ ಹಾಗೂ ಭಜನೆಗಳು ಇಂದಿಗೂ ವಿಭಜನೆಯನ್ನು ಮಾಡುವುದಿಲ್ಲ ಬದಲು ಒಂದುಗೂಡಿಸುತ್ತವೆ ಎಂದರು. ಸಾರವ ಸಂಗೀತ ಕಲಾಸಂಸ್ಥೆಯ ಲೋಗೋವನ್ನು ಉದ್ಯಮಿ ಶ್ರೀಪತಿ ಭಟ್ ಅನಾವರಣ ಗೈದರು. ಗುರು ಶಿಷ್ಯ ಪರಂಪರೆಯ ಬಗ್ಗೆ ಹಲವಾರು ಉದಾಹರಣೆಗಳೊಂದಿಗೆ ಪ್ರಕಾಶ್ ಮಲ್ಪೆ ಉಪನ್ಯಾಸ ನೀಡುತ್ತಾ ಸಾಧಕ ಎಲ್ಲಿಯೂ ನಿಲ್ಲದೆ ಸಾಧನೆಯನ್ನು ನಿರಂತರ ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಸಹಾಯಕ ಉಪನಿರೀಕ್ಷಕ ಗೋಪಾಲಕೃಷ್ಣ ಕುಂದರ್, ಶೈಕ್ಷಣಿಕ ಕ್ಷೇತ್ರದ ಡಾ. ಗುರುಪ್ರಸಾದ್ ಮಣಿಪಾಲ, ಸಂಗೀತದ ಡಾ. ವೈಷ್ಣವಿ ರವಿ, ಮಾಧ್ಯಮದ ರಾಮ ಅಜೆಕಾರ್, ವಿಜ್ಞಾನದ ಮೌಲ್ಯ ವೈ ಜೈನ್, ನಟನೆಯ ರಜಾಕ್ ಪುತ್ತೂರು, ಬಹುಮುಖ ಪ್ರತಿಭೆಯ ಸುಜ್ಞಾನಕೋಟಿಯ ಸಾಧಕರನ್ನು ಸನ್ಮಾನಿಸಲಾಯಿತು. ಸಾರವ ಸಂಗೀತ ಕಲಾಸಂಸ್ಥೆಯ ಅಧ್ಯಕ್ಷ ವಿದ್ವಾನ್ ಯಶ್ವಂತ್ ಎಂಜಿ ಪ್ರಸ್ತಾವಿಕ ಮಾತನಾಡಿದರು. ನಿತೀಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.