ಉಜಿರೆ: ಬದುಕುಕಟ್ಟೋಣ ತಂಡದ ನೇತೃತ್ವದಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಕ್ರೀಡಾಸಂಘ,, ಬೆಳ್ತಂಗಡಿ ರೋಟರಿ ಕ್ಲಬ್, ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ಬೆಳಾಲು ಗ್ರಾಮದ ಅನಂತೋಡಿಯ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಹಯೋಗದಲ್ಲಿ ನಾಲ್ಕು ಎಕ್ರೆ ಗದ್ದೆಯಲ್ಲಿ ಬೆಳೆಸಿದ ಭತ್ತದ ಪೈರನ್ನು ಒಂದು ಸಾವಿರಕ್ಕೂ ಮಿಕ್ಕಿ ಸ್ವಯಂ ಸೇವಕರು ಭಾನುವಾರ ಒಂದು ಗಂಟೆಯಲ್ಲಿ ಕಟಾವು ಮಾಡಿ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರರಾದರು.
ಯುವಜನತೆಯ ಸೇವೆಯನ್ನು ಶ್ಲಾಘಿಸಿದ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು, ಅನ್ನಬ್ರಹ್ಮನ ಸೇವೆ ಪವಿತ್ರ ಕಾಯಕವಾಗಿದೆ. ಇಂದು ಕೈ ಕೆಸರು ಮಾಡುವ ಕೃಷಿ ಕೆಲಸ ಯಾರಿಗೂ ಇಷ್ಟವಿಲ್ಲ. ಹಲವು ವರ್ಷ ಬರಡು ಭೂಮಿಯಾಗಿದ್ದ ಗದ್ದೆಯನ್ನು ಹಸನು ಮಾಡಿ ನೇಜಿ ನಾಟಿ ಮಾಡಿ, ಪೈರು ಕಟಾವು ಮಾಡಿದ ಯುವಜನರ ಸೇವೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.
ಬದುಕು ಕಟ್ಟೋಣ ತಂಡದವರು ವಿವಿಧ ಆಯಾಮಗಳಲ್ಲಿ ಮಾಡುತ್ತಿರುವ ಬಹುಮುಖಿ ಸಮಾಜ ಸೇವೆಯನ್ನು ಅವರು ಶ್ಲಾಘಿಸಿ ಇದೊಂದು ಮಾದರಿ ಕಾರ್ಯಕ್ರಮ ಹಾಗೂ ಇತರರಿಗೆ ಸ್ಪೂರ್ತಿದಾಯಕವಾಗಿದೆ ಎಂದರು.
“ಯುವಸಿರಿ, ರೈತ ಭಾರತದ ಐಸಿರಿ” ಒಂದು ಸುಂದರ, ಆಕರ್ಷಕ ಕಾರ್ಯಕ್ರಮವಾಗಿದ್ದು, ಯುವಜನತೆಗೆ ಸಕ್ರಿಯವಾಗಿ ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕು ಎಂದು ಅವರು ಸಲಹೆ ನೀಡಿದರು.
ಪೈರು ಕಟಾವು ಕಾರ್ಯಕ್ರಮವನ್ನು ಉದ್ಘಾಟಿಸಿದ ಸೋನಿಯಾ ಯಶೋವರ್ಮ ಮಾತನಾಡಿ, ಮಣ್ಣಿಗೂ, ಮಕ್ಕಳಿಗೂ ಅವಿನಾಭಾವ ಸಂಬಂಧವಿದೆ. ಮಕ್ಕಳಿಗೆ ಕುತೂಹಲ, ಆಸಕ್ತಿ, ಜಾಸ್ತಿ ಇದ್ದು, ಕೃಷಿ ಚಟುವಟಿಕೆಗಳಲ್ಲಿ ಖುಷಿಯಿಂದ ಭಾಗವಹಿಸಿ ಆನಂದಿಸಬೇಕು. ಅನ್ನದ ಮಹತ್ವವನ್ನು ಅರಿತುಕೊಂಡು ಒಂದು ಅಗಳು ಅನ್ನಕೂಡಾ ಅಪವ್ಯಯ ಮಾಡಬಾರದು ಎಂದು ಅವರು ಕಿವಿಮಾತು ಹೇಳಿದರು.
ಬದುಕು ಕಟ್ಟೋಣ ತಂಡದ ಸಾಮಾಜಿಕ ಕಳಕಳಿ ಹಾಗೂ ಇತರರ ಕಷ್ಟಗಳಿಗೆ ಸ್ಪಂದಿಸಿ ಸಕಾಲಿಕ ನೆರವು ನೀಡುವ ಕಾರ್ಯಕ್ರಮವನ್ನು ಅವರು ಶ್ಲಾಘಿಸಿದರು.
ಕರ್ನಾಟಕ ಸರ್ಕಾರದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮಾತನಾಡಿ, ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಭತ್ತದ ಕೃಷಿ ಬಗ್ಯೆ ನೀಡಿದ ಮಾಹಿತಿ, ತರಬೇತಿ ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಕೂಡಾ ಇದೇ ರೀತಿ ಕೃಷಿ ಕಾಯಕದ ಬಗ್ಯೆ ತರಬೇತಿ ನೀಡುವ ಬಗ್ಯೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.
ಸಹಕಾರ ನೀಡಿದವರಿಗೆ ಸನ್ಮಾನ: ಭತ್ತದ ಕೃಷಿ ಬಗ್ಯೆ ಸಕ್ರಿಯ ಸಹಕಾರ ನೀಡಿದವರನ್ನು ಗೌರವಿಸಲಾಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್‌ವರ್ಮ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಬೆಳಾಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ ಗೌಡ, ಎಸ್.ಡಿ.ಎಂ. ಕಾಲೇಜಿನ ಕ್ರೀಡಾ ನಿರ್ದೇಶಕ ರಮೇಶ್ ಮತ್ತು ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಮಹೇಶ್ ಶೆಟ್ಟಿ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ರೈತ ಕರ್ಮಯೋಗಿಯಾಗಿದ್ದು ಪ್ರಕೃತಿ ಜೊತೆ ಅವಿನಾಭಾವ ಸಂಬಂಧ ಹೊಂದಿದ ರೈತನಿಗೆ ಕೃಷಿಯೇ ತಪಸ್ಸು. ಊಟವೇ ಯಜ್ಞ. ಎಲ್ಲರಿಗೂ ಬದುಕಿಗೆ ಶಕ್ತಿ ಕೊಡುವ ಅನ್ನ ನೀಡುವ ಸಾಮರ್ಥ್ಯ ರೈತನಿಗೆ ಮಾತ್ರಾ ಇದೆ. ಕೃಷಿ ಕಾಯಕ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಹೊಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್‌ರೊ. ಬಿ.ಎ. ಕುಮಾರ ಹೆಗ್ಡೆ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಮತ್ತು ಶರತ್‌ಕೃಷ್ಣ ಪಡ್ವೆಟ್ನಾಯ ಉಪಸ್ಥಿತರಿದ್ದರು.
ವಕೀಲ ಬಿ.ಕೆ. ಧನಂಜಯ್ ರಾವ್ ಸ್ವಾಗತಿಸಿದರು. ಪ್ರೊ. ಮಹೇಶ್ ಕುಮಾರ ಶೆಟ್ಟಿ ಧನ್ಯವಾದವಿತ್ತರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಮುಖ್ಯಾಂಶಗಳು:
ಅಕ್ಕಿಯನ್ನು ದೇವಾಲಯದಲ್ಲಿ ದೇವರ ನೈವೇದ್ಯಕ್ಕೆ ವಿನಿಯೋಗಿಸಲಾಗುವುದು.
ಬೈ ಹುಲ್ಲನ್ನು ಕಳೆಂಜದ ಗೋ ಶಾಲೆಗೆ ಬಳಸಲಾಗುವುದು.
ಪ್ರತಿ ವರ್ಷ ಲೋಕಕಲ್ಯಾಣಕ್ಕಾಗಿ ಕೃಷಿ ಕಾಯಕವನ್ನು ಮಾಡಲಾಗುವುದು ಎಂದು ಬದುಕು ಕಟ್ಟೋಣ ತಂಡದ ರೂವಾರಿ ಉಜಿರೆಯ ಮೋಹನ ಕುಮಾರ್ ಮತ್ತು ರಾಜೇಶ್ ಪೈ ತಿಳಿಸಿದ್ದಾರೆ.
ಸ್ವಯಂ ಸೇವಕರಿಗೆ ಪೈರು ಕಟಾವಿಗೆ ಒಂದು ಸಾವಿರ ಕತ್ತಿ ಮತ್ತು ತಲೆಗೆ ಇಡಲು ಒಂದು ಸಾವಿರ ಅಡಿಕೆ ಹಾಳೆಯ ಟೊಪ್ಪಿ (ತುಳು: ಪಾಲೆ) ಗಳನ್ನು ವಿತರಿಸಲಾಯಿತು.
ಪೈರನ್ನು ಗದ್ದೆಯಿಂದ ಪಲ್ಲಕ್ಕಿಯಲ್ಲಿ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯಲ್ಲಿ ಕೊಂಡುಹೋಗಿ ದೇವಸ್ಥಾನದ ಎದುರು ಪೈರಿನಿಂದ ಭತ್ತವನ್ನು ಬೇರ್ಪಡಿಸಲಾಯಿತು.
ಹರೀಶ್ ಮತ್ತು ಸ್ಮಿತೇಶ್ ನಿರ್ದೇಶನದಲ್ಲಿ ರೂಪಿಸಿದ ಬೆಳಾಲು ಭತ್ತದ ಕೃಷಿ ಬಗ್ಯೆ ಕಿರುಚಿತ್ರಕ್ಕೆ ಜಾಗತಿಕ ಮಟ್ಟದಲ್ಲಿ ನಾಲ್ಕು ಪ್ರಶಸ್ತಿಗಳು ದೊರಕಿವೆ. ವಿಶ್ವದಾಖಲೆಗೂ ಆಯ್ಕೆಯಾಗಿದೆ.