ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆಯ ಸಂಭ್ರಮದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಟ್ರಸ್ಟ್ ನೇತೃತ್ವದಲ್ಲಿ ಈ ವರ್ಷ ಆಗಸ್ಟ್ 27ರಿಂದ ಸಮಾಜ ಮಂದಿರದಲ್ಲಿ ನಡೆಯಲಿದೆ . ಈ ವರ್ಷವೂ ಗಣೇಶೋತ್ಸವದ 62ನೇ ವರ್ಷದ ಸಂಭ್ರಮವನ್ನು ಸರ್ವ ಜನರ ಹಬ್ಬವಾಗಿ ನಡೆಸಲು ಉದ್ದೇಶಿಸಿದ್ದೇವೆ. ಜ್ಯೋತಿನಗರ ಬಳಿ ಇರುವ ಹಿಂದೂ ರುದ್ರ ಭೂಮಿಯನ್ನು ಅಭಿವೃದ್ಧಿ ಪಡಿಸಲು ನಮ್ಮ ಸಮಿತಿಗೆ ಅವಕಾಶ ಕೊಡುವಂತೆ ಮೂಡುಬಿದಿರೆ ಪುರಸಭೆಯನ್ನು ಕೋರಿದ್ದೇವೆ ಎಂದು ಟ್ರಸ್ಟ್ ಅಧ್ಯಕ್ಷ ನಾರಾಯಣ ಪಿ.ಎಂ ಹೇಳಿದರು.
ಮೂಡುಬಿದಿರೆ ನಿಶ್ಮಿತಾ ಸಭಾಭವನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಪತ್ರಕರ್ತರ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರು ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಮೂಡುಬಿದಿರೆ ಗಣೇಶೋತ್ಸವವನ್ನು ಇಲ್ಲಿಯ ಸರ್ವಜನರ ಹಬ್ಬವಾಗಿ ಮುನ್ನುಡಿ ಬರೆದರು. ಈ ಬಾರಿ ಮೂಡುಬಿದಿರೆ ರುದ್ರ ಭೂಮಿಯನ್ನು ಸುಸಜ್ಜಿತವಾಗಿ ಅಭಿವೃದ್ಧಿ ಪಡಿಸುವ ಚಿಂತನೆ ಮಾಡಿದ್ದು, ಈ ಬಗ್ಗೆ ಈ ಹಿಂದೆಯೂ ಹಲವಾರು ಬಾರಿ ಪುರಸಭೆಯನ್ನು ವಿನಂತಿಸಿದ್ದರು. ಗಣೇಶೋತ್ಸವದ ಸಮರ್ಪಕ ನಿರ್ವಹಣೆಗೆ ಅಗತ್ಯವಿರುವ ಸಲಹೆಯನ್ನು ಕೋರಿ ಮೂಡುಬಿದಿರೆ ಉತ್ಸವವಾಗಿ ಮುಂದುವರಿಯಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಬಾರಿ ಗಣೇಶೋತ್ಸವವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಉದ್ಘಾಟಿಸಲಿರುವರು. ಶಾಸಕ ಉಮಾನಾಥ್ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್ ಉಪಸ್ಥಿತರಿರುವರು. ಮೂಡುಬಿದಿರೆ ಪುರಸಭೆ ಗಣೇಶೋತ್ಸವ ಸಂದರ್ಭದಲ್ಲಿ ಪೇಟೆಯ ಅಲಂಕಾರ ನಡೆಸಿ ಸಹಕರಿಸುವಂತೆಯೂ ವಿನಂತಿಸಿದರು.
ಗಣೇಶೋತ್ಸವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ., ಉಪಾಧ್ಯಕ್ಷ ಕೊರಗ ಶೆಟ್ಟಿ, ಕೋಶಾಧಿಕಾರಿ ಚೇತನ್ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದರು.