ವರದಿ ರಾಯಿ ರಾಜಕುಮಾರ

ಮೂಡಬಿದಿರೆ: ಡಿಜಿ ಯಕ್ಷ ಫೌಂಡೇಶನ್ ಬೆಂಗಳೂರು ಆಶ್ರಯದಲ್ಲಿ ಐದನೇ ವರ್ಷದ ಶ್ರೀ ಹರಿಲೀಲಾ ಯಕ್ಷನಾದ ಉತ್ಸವ ಅಲಂಗಾರು ಬಡಗು ಮಹಾ ಗಣಪತಿ ಮಹಾಲಿಂಗೇಶ್ವರ ದೇವಾಲಯದಲ್ಲಿ ಡಿಸೆಂಬರ್ 9 ರಂದು ನಡೆಯಿತು. ಲೀಲಾ ಬೈಪಾಡಿತಾಯರ ಪ್ರಥಮ ಪುಣ್ಯ ಸ್ಮರಣೆಯೊಂದಿಗೆ  ಹರಿಲೀಲಾ ಯಕ್ಷನಾದ ಪ್ರಶಸ್ತಿಯನ್ನು ಹಿರಿಯ ಮದ್ದಳೆಗಾರ ಪದ್ಯಾಣ ಶಂಕರ್ ನಾರಾಯಣ ಭಟ್ ಅವರಿಗೆ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ವಿದ್ವಾಂಸ ಡಾ.ಎಂ. ಪ್ರಭಾಕರ್ ಜೋಶಿ ದೀಪಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಯಕ್ಷಗಾನದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು ಎಂದು ಕೇಳಿಕೊಂಡರು. ಕಟೀಲು ಅನುವಂಶಿಕ ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ ಆಶೀರ್ವಚನ ಗೈದರು. ಯಕ್ಷಗಾನದ ಹಿರಿಯ ವಿದ್ವಾಂಸ ಪ್ರೊ. ಎಂ ಎಲ್ ಸಾಮಗ ಅಧ್ಯಕ್ಷತೆಯನ್ನು ವಹಿಸಿ ಸಂಸ್ಮರಣೆ ಗೈದರು. ವೇದಿಕೆಯಲ್ಲಿ ಉದ್ಯಮಿ ಶ್ರೀಪತಿ ಭಟ್, ಹರಿನಾರಾಯಣ ಭೈಪಡಿತಾಯ, ಉಪಸ್ಥಿತರಿದ್ದರು.

ಚಂದ್ರಶೇಖರ ಭಟ್ ಸ್ವಾಗತಿಸಿದರು. ಅವಿನಾಶ ಬೈಪಡಿತಾಯ ಪ್ರಾಸ್ತಾವಿಕ ಮಾತನಾಡಿದರು. ವಾಸುದೇವ ರಂಗ ಭಟ್ ಪುರಸ್ಕೃತರ ಅಭಿನಂದನೆ ಗೈದರು. ಸಾಯಿ ಸುಮ ನಾವಡ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ತರುವಾಯ ಚೆಂಡೆ ಜುಗಲ್ ಬಂದಿ, ಮಹಿಳಾ ಹಿಮ್ಮೇಳ-ಮುಮ್ಮೇಳದ ದಕ್ಷಯಜ್ಙ ಯಕ್ಷಗಾನ ನಡೆಯಿತು.