ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಸರ್ಕಾರ ಹಾಗೂ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ರೀಡಾಳುಗಳಿಗೆ ಸರ್ಕಾರವಾಗಲಿ ವಿಶ್ವವಿದ್ಯಾಲಯವಾಗಲಿ ಯಾವುದೇ ಪ್ರೋತ್ಸಾಹವನ್ನು ನೀಡುತ್ತಿಲ್ಲ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ ಮೋಹನ್ ಆಳ್ವ ಖೇದ ವ್ಯಕ್ತಪಡಿಸಿದ್ದಾರೆ.
ಹಿಂದಿನ ವರ್ಷ ಅಂತರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿ ಸುಮಾರು 1.8 ವರ್ಷಗಳೇ ಕಳೆದರೂ ಇದುವರೆಗೂ ಬಿಡುಗಡೆಯಾದ ಹಣವಿ.ವಿ. ಪಾವತಿ ಮಾಡಿರುವುದಿಲ್ಲ. ದೇಶಿಯ ಮಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಐದನೇ ಸ್ಥಾನಕ್ಕೆ ಏರಿಸಿದ ಆಳ್ವಾಸ್ ಕ್ರೀಡಾಳುಗಳಿಗೆ ಯಾವುದೇ ಪ್ರೋತ್ಸಾಹಕರವನ್ನು ಕೂಡ ಈತನಕ ನೀಡಿರುವುದಿಲ್ಲ. ದೇಶಿಯ 78 ವರ್ಷದ ಕ್ರೀಡಾಕೂಟದಲ್ಲಿ 13 ದಾಖಲೆಗಳನ್ನು ಬರೆದ ಏಕೈಕ ಕಾಲೇಜು ಆಳ್ವಾಸ್ ಆಗಿದ್ದರು ಯಾವುದೇ ಪ್ರೋತ್ಸಾಹ ಈತನಕ ರಾಜ್ಯ ಸರಕಾರದಿಂದಾಗಲಿ, ಮಂಗಳೂರು ವಿಶ್ವವಿದ್ಯಾಲಯದಿಂದಾಗಲಿ ದೊರಕಿರುವುದಿಲ್ಲ.
ನಮ್ಮ ಹತ್ತಿರದ ಕೇರಳ ಸರ್ಕಾರ ಎಲ್ಲ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡಿ ಉದ್ಯೋಗದಲ್ಲೂ ಪ್ರಾಧಾನ್ಯತೆಯನ್ನು ಒದಗಿಸಿಕೊಡುತ್ತಿದೆ. ಒರಿಸ್ಸಾ, ಪಂಜಾಬ್, ಹರಿಯಾಣ ಇತ್ಯಾದಿ ರಾಜ್ಯಗಳು ಕೂಡ ಈ ದಿಸೆಯಲ್ಲಿ ಹಿಂದುಳಿದಿಲ್ಲ. ಆದರೆ ಬಹಳ ದುರಂತದ ಸಂಗತಿ ಏನೆಂದರೆ, ನಮ್ಮದೇ ರಾಜ್ಯ ಸರ್ಕಾರ ಮತ್ತು ವಿ.ವಿ.ವು.ವಿದ್ಯಾರ್ಥಿಗಳಿಂದ ಮೂರು ಕೋಟಿಗೂ ಹೆಚ್ಚು ಕ್ರೀಡಾ ನೀಧಿಯನ್ನು ಸಂಗ್ರಹಿಸುವ ಮಂಗಳೂರು ವಿಶ್ವವಿದ್ಯಾಲಯ ಕನಿಷ್ಠಪಕ್ಷ ಅದನ್ನಾದರೂ ಪ್ರತಿಭಾವಂತ ಕ್ರೀಡಾಳುಗಳಿಗೆ ಒದಗಿಸಿಕೊಟ್ಟಲ್ಲಿ ಇನ್ನಷ್ಟು ಹೆಚ್ಚಿನ ದಾಖಲೆಗಳನ್ನು ವಿದ್ಯಾರ್ಥಿಗಳು ತೋರಿಸಿಕೊಡಲು ಸಾಧ್ಯವಾಗುತ್ತದೆ.
ಭಾರತದ ಒಟ್ಟು 125 ವಿಶ್ವವಿದ್ಯಾಲಯಗಳ 45,000 ಕಾಲೇಜುಗಳಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ 75 ಕ್ರೀಡಾಪಟುಗಳ ಸಾಧನೆ ನಿಜಕ್ಕೂ ಅಭಿನಂದನೀಯ. ಇಂತಹ ಅಭಿನಂದನಾ ಸಂಗತಿಯನ್ನು ಹೇಳಿಕೊಳ್ಳುವುದಕ್ಕೂ ಉಡುಪಿ ಜಿಲ್ಲೆಯ ಹಾಗೂ ದ.ಕ. ಜಿಲ್ಲಾ ಕ್ರೀಡಾ ಆಯೋಜಕರಿಗೆ, ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ರಾಜ್ಯದ ನಾಯಕರುಗಳಿಗೆ ಸಮಯ, ಸಂದರ್ಭ ಒದಗದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಡಾ. ಮೋಹನ್ ಆಳ್ವ ಖೇದ ವ್ಯಕ್ತಪಡಿಸಿದರು.